ಬೆಂಗಳೂರು: ‘ಜಾತಿವಾರು ಸಮೀಕ್ಷೆ ವೇಳೆ ಯಾವುದೇ ಜಾತಿ, ಸಮುದಾಯದವರೇ ಇರಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಎಂದು ಪಕ್ಷದ ರಾಜಕೀಯ ಚಿಂತನಾ ಶಿಬಿರದಲ್ಲಿ ನಿರ್ಣಯಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಚಿಂತನಾ ಶಿಬಿರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇದೊಂದು ದುರಂತ ಎಂದರು.
ಜಾತಿ, ಉಪಜಾತಿ ಹೆಸರು ನಮೂದಿಸುವುದು ಆಯಾ ಜಾತಿ, ಸಮುದಾಯಕ್ಕೆ ಬಿಟ್ಟ ವಿಚಾರ. ಅದನ್ನು ಅವರು ತೀರ್ಮಾನಿಸಬೇಕು. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಲ್ಲಿ ಹಿಂದೂ ಬರೆಸಬೇಕು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ರಾಜ್ಯಗಳಿಗೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲದಿದ್ದರೂ 47 ಹೊಸ ಜಾತಿಗಳ ಸೃಷ್ಟಿಸುವ ಮೂಲಕ ‘ಸಮೀಕ್ಷೆ’ ಹೆಸರಿನಲ್ಲಿ ಗಣತಿಗೆ ಮುಂದಾಗಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ನೇಕಾರ, ಕ್ರಿಶ್ಚಿಯನ್ ಪರಿಶಿಷ್ಟ ಜಾತಿ, ಕ್ರಿಶ್ಚಿಯನ್ ಪರಿಶಿಷ್ಟ ಪಂಗಡ ಎಂದು ಗೊಂದಲ ಸೃಷ್ಟಿ ಮಾಡಿದೆ ಎಂದರು ವಿಜಯೇಂದ್ತ ದೂರಿದರು.
‘ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂತರಾಜ ವರದಿ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈ ವರದಿ ಅವೈಜ್ಞಾನಿಕ ಎಂದು ನಾವು ವಿರೋಧಿಸಿದ್ದೆವು. ರಾಹುಲ್‌ಗಾಂಧಿಯವರು ಹೇಳಿದ್ದಾರೆಂಬ ಒಂದೇ ಕಾರಣಕ್ಕೆ ಕಾಂತರಾಜ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ಕಸದಬುಟ್ಟಿಗೆ ಹಾಕಿತು. ಹಿಂದೆ ಸಿದ್ದರಾಮಯ್ಯ ಸರ್ಕಾರ ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು’ ಎಂದು ವಿಜಯೇಂದ್ರ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ವಿ.ಸುನಿಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜ್, ಶಾಸಕರಾದ ಅರವಿಂದ ಬೆಲ್ಲದ, ಶಶಿಕಲಾ ಜೊಲ್ಲೆ ಮತ್ತಿತರರು ಇದ್ದರು.
ನಿರ್ಣಯ
ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಸರಳೀಕೃತ ಜಿಎಸ್‌ಟಿ ಮೂಲಕ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದಕ್ಕೆ ರಾಜ್ಯ ಮತ್ತು ದೇಶದ ಜನ ಸಂತೋಷ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದಿಸುವ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.