ADVERTISEMENT

ಸಂಕ್ರಾಂತಿ ಬಳಿಕ ಬಿಜೆಪಿ ಸಮಾವೇಶ

ಲೋಕಸಭೆ ಚುನಾವಣೆಗೆ ಸಿದ್ಧತೆ: ಜ.11, 12ರಂದು ಶಾಸಕರು ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:56 IST
Last Updated 20 ಡಿಸೆಂಬರ್ 2018, 20:56 IST
   

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ‘ಮಿಷನ್‌–24’ ಗುರಿ ತಲುಪಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೀಡಿರುವ ಸೂಚನೆಯನ್ನು ಪಾಲಿಸಲು ಮುಂದಾಗಿರುವ ರಾಜ್ಯ ಘಟಕ,ಇದಕ್ಕಾಗಿ ಸಂಕ್ರಾಂತಿ ಬಳಿಕ ಸರಣಿ ಸಮಾವೇಶ ಹಾಗೂ ರ‍್ಯಾಲಿಗಳನ್ನು ನಡೆಸಲು ನಿರ್ಧರಿಸಿದೆ.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಜತೆಗೆ ವರಿಷ್ಠರು ಕಳೆದ ವಾರ ಸಭೆ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸುವ 70 ಅಂಶಗಳನ್ನು ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಚರ್ಚಿಸಲು ‌ಪಕ್ಷದ ಶಾಸಕಾಂಗ ಪಕ್ಷದ ಸಭೆ ಗುರುವಾರ ನಡೆಯಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ಶಕ್ತಿ ಕೇಂದ್ರಗಳ ಪಾತ್ರ ಮಹತ್ವದ್ದು. ಶಕ್ತಿ ಕೇಂದ್ರಗಳಿಗೆ ಇನ್ನಷ್ಟು ಬಲ ತುಂಬಲು ಸಮಾವೇಶಗಳನ್ನು ನಡೆಸಬೇಕು. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.

ADVERTISEMENT

ಐದರಿಂದ ಆರು ಲೋಕಸಭಾ ಕ್ಷೇತ್ರಗಳನ್ನು ಸೇರಿಸಿ ಉಳಿದ ಭಾಗಗಳಲ್ಲಿ ಸಮಾವೇಶ ಮಾಡಲಾಗುತ್ತದೆ. ಒಟ್ಟು 6ರಿಂದ 8 ಸಮಾವೇಶಗಳನ್ನು ನಡೆಸಲು ಚರ್ಚಿಸಲಾಯಿತು. ಈ ಎಲ್ಲ ಸಮಾವೇಶಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಿಗೆ ಬಲ: ಶಕ್ತಿಕೇಂದ್ರ ಮಟ್ಟದಲ್ಲಿ ಸಾಮಾಜಿಕ ಜಾಲತಾಣದ ಘಟಕಗಳನ್ನು ತೆರೆಯಬೇಕು. ಈ ಮೂಲಕ ಕಾಂಗ್ರೆಸ್‌ ಆರೋಪಗಳಿಗೆ ಹಾಗೂ ಮೈತ್ರಿ ಸರ್ಕಾರದ ಆರೋಪಗಳ ಬಗ್ಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

‍ಪ್ರತಿ ಕ್ಷೇತ್ರಕ್ಕೆ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮ ಸಂಚಾಲಕರು ಹಾಗೂ ಕಾನೂನು ಪರಿಣಿತರನ್ನು ಒಳಗೊಂಡ ತಂಡವನ್ನು ಈ ತಿಂಗಳ ಅಂತ್ಯದೊಳಗೆ ರಚಿಸಬೇಕು ಎಂದು ನಿರ್ಧರಿಸಲಾಯಿತು.

ಶಾಸಕರು ದೆಹಲಿಗೆ:ರಾಜ್ಯದ 104 ಶಾಸಕರು ಜನವರಿ 11 ಹಾಗೂ 12ರಂದು ದೆಹಲಿಗೆ ಬರಬೇಕು ಎಂದು ಪಕ್ಷದ ವರಿಷ್ಠರು ಕಟ್ಟಪ್ಪಣೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ಸಿದ್ಧತೆಗಾಗಿ ಎಲ್ಲ ರಾಜ್ಯಗಳ ಶಾಸಕರ ಸಭೆಯನ್ನು ಅಮಿತ್ ಶಾ ಕರೆದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ನಡೆಸಬೇಕಾದ ತಂತ್ರಗಳ ಬಗ್ಗೆ ಅವರು ಸಲಹೆಗಳನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಜ.15ರ ನಂತರ ಸರಣಿ ಸಮಾವೇಶ

ರೈತ ಮೋರ್ಚಾ ಹೊರತುಪಡಿಸಿ ಯುವ ಮೋರ್ಚಾ, ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ, ಪಂಗಡದ ಮೋರ್ಚಾ, ಒಬಿಸಿ ಮೋರ್ಚಾಗಳು ಸಕ್ರಿಯವಾಗಿಲ್ಲ. ಜನವರಿ 15ರ ಬಳಿಕ ಈ ಎಲ್ಲ ಮೋರ್ಚಾಗಳ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಯಿತು. ಈ ಸಮಾವೇಶಗಳಿಗೆ ಕನಿಷ್ಠ 40 ಸಾವಿರದಿಂದ 80 ಸಾವಿರ ಮಂದಿಯನ್ನು ಸೇರಿಸಬೇಕು ಎಂದೂ ಚರ್ಚಿಸಲಾಯಿತು.

**

ಫೆಬ್ರುವರಿಯಲ್ಲಿ ಮೋದಿ ರ‍್ಯಾಲಿ

ಫೆಬ್ರುವರಿಯಲ್ಲಿ ರಾಜ್ಯದಲ್ಲಿ ನಡೆಯುವ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ಮೋದಿ ಅವರು ಹೆಚ್ಚಿನ ಸಂಖ್ಯೆಯ ರ‍್ಯಾಲಿಗಳಲ್ಲಿ ಪಾಲ್ಗೊಂಡರೆ ‘ಮಿಷನ್–24’ ಗುರಿ ತಲುಪಲು ಸಾಧ್ಯ. ಅವರ ಭೇಟಿಯ ಬಳಿಕ ಮತ ಪ್ರಮಾಣ ಶೇ 5ರಿಂದ 10ರಷ್ಟು ಹೆಚ್ಚಲಿದೆ. ರಾಜ್ಯದಲ್ಲಿ ಅಧಿಕ ಸಂಖ್ಯೆಯ ರ‍್ಯಾಲಿಗಳಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಘಟಕ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.