ADVERTISEMENT

ಬಿಜೆಪಿ ಸಂಸದರಿಂದ ನಡ್ಡಾ ಭೇಟಿ; ರಾಜ್ಯಕ್ಕೆ 1.35 ಲಕ್ಷ ಟನ್‌ ರಸಗೊಬ್ಬರ

ಕೇಂದ್ರ ಸಚಿವ ನಡ್ಡಾ ಭೇಟಿಯಾದ ಬಿಜೆಪಿ ಸಂಸದರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 16:17 IST
Last Updated 28 ಜುಲೈ 2025, 16:17 IST
<div class="paragraphs"><p>ರಸಗೊಬ್ಬರ</p></div>

ರಸಗೊಬ್ಬರ

   

ನವದೆಹಲಿ: ‘ರಸಗೊಬ್ಬರದ ಬಗ್ಗೆ ಕರ್ನಾಟಕ ಕೃಷಿ ಇಲಾಖೆ ಪೂರ್ವಸಿದ್ಧತೆ ಮಾಡಿಕೊಳ್ಳದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿ ಕೊಡುವುದೇ ದೊಡ್ಡ ಸಾಧನೆ ಅಲ್ಲ. ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು’ ಎಂದು ಬಿಜೆಪಿ ಸಂಸದರು ಆಗ್ರಹಿಸಿದರು. 

ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ. ಸಿ.ಎನ್‌. ಮಂಜುನಾಥ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಈರಣ್ಣ ಕಡಾಡಿ, ಪಿ.ಸಿ ಗದ್ದಿಗೌಡರ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ADVERTISEMENT

‘ರಾಜ್ಯ ಸರ್ಕಾರಕ್ಕೆ ಕೇಂದ್ರವು ಈ ವರ್ಷ 7.74 ಲಕ್ಷ ಟನ್ ರಸಗೊಬ್ಬರ ವಿತರಣೆ ಮಾಡಿದೆ. 1.35 ಲಕ್ಷ ಟನ್ ಸರಬರಾಜು ಮಾಡಬೇಕಿದೆ. ಈ ಬಗ್ಗೆ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರನ್ನು ಕೇಂದ್ರ ಸಚಿವರು ಹಾಗೂ ಸಂಸದರು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. 10–15 ದಿನಗಳಲ್ಲಿ ರಸಗೊಬ್ಬರವು ರಾಜ್ಯಕ್ಕೆ ಸರಬರಾಜು ಆಗಲಿದೆ’ ಎಂದು ಬೊಮ್ಮಾಯಿ ತಿಳಿಸಿದರು. 

ಈಗಾಗಲೇ 16 ಸಾವಿರ ಟನ್ ರಾಜ್ಯಕ್ಕೆ ತಲುಪುತ್ತಿದೆ. ಈಗಿರುವ ಗೊಬ್ಬರವನ್ನು ಸರಿಯಾಗಿ ವಿತರಣೆ ಮಾಡಬೇಕು. ರಾಜ್ಯ ಸರ್ಕಾರವು ಅಕ್ರಮ ದಾಸ್ತಾನು ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು. 

ರೈತರ ವಿಚಾರದಲ್ಲಿ ಕಾಂಗ್ರೆಸ್‌ನವರು ರಾಜಕೀಯ ಮಾಡಬಾರದು. ಮುಖ್ಯಮಂತ್ರಿ ಪತ್ರ ಬರೆದ ಬಳಿಕ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಾಗಾಣಿಕೆ ಸಮಸ್ಯೆಯಿಂದ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು ಎಂದು ಅವರು ಸಲಹೆ ನೀಡಿದರು. 

‘ರಾಜ್ಯದಲ್ಲಿ 1.35 ಲಕ್ಷ ಟನ್‌ ಗೊಬ್ಬರ ದಾಸ್ತಾನು ಇದೆ. ಇದನ್ನು ಸರಿಯಾಗಿ ಬಳಸಿದರೆ ಸಮಸ್ಯೆ ಬಗೆಹರಿಸಬಹುದು. ಇರುವ ರಸಗೊಬ್ಬರವನ್ನು ಅವಶ್ಯಕತೆ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಸೆಪ್ಟೆಂಬರ್ ಅಂತ್ಯದ ವರೆಗೆ 11 ಲಕ್ಷ ಯೂರಿಯಾ, ಡಿಎಪಿ ಬೇಕು. ರಾಜ್ಯ ಸರ್ಕಾರ ಸಂಗ್ರಹ ಮಾಡಿಕೊಳ್ಳಬೇಕಿತ್ತು. ಹಂಚಿಕೆಯಲ್ಲಿ ಅವ್ಯವಸ್ಥೆ ಆಗಿದೆ’ ಎಂದರು. 

ಈ ಸಲ ಮುಂಗಾರು ಮಳೆ ಚೆನ್ನಾಗಿ ಆಗಿದೆ. ಬಹಳ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಒಂದೂವರೆ ಪಟ್ಟು ಬಿತ್ತನೆ ಆಗಿದೆ. ಕೃಷಿ ಇಲಾಖೆಗೂ ಈ ಬಗ್ಗೆ ಮಾಹಿತಿ ಇದೆ.  ಮಳೆಯಿಂದ ಪದೇ ಪದೇ ಯೂರಿಯಾ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದರು. 

‘ರಾಜ್ಯದಲ್ಲಿ ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.‌ ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ದುಡ್ಡು ಕೊಟ್ಟು ಖರೀದಿಸುತ್ತಿದ್ದಾರೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು ಮಾಡಿ, ಕಾಳ ಸಂತೆ ಮೂಲಕ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.