ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್
ನವದೆಹಲಿ: ಎರಡು ವರ್ಷಗಳಿಂದ ಪಕ್ಷದಿಂದೊಂದಿಗೆ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹಾಗೂ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿ ಮಂಗಳವಾರ ಉಚ್ಚಾಟಿಸಿದೆ.
‘ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ನಿಮ್ಮನ್ನು ಆರು ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಲಾಗಿದೆ’ ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಆದೇಶದಲ್ಲಿ ತಿಳಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಹೆಬ್ಬಾರ, ಸೋಮಶೇಖರ್, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮಾರ್ಚ್ 25ರಂದು ಷೋಕಾಸ್ ನೋಟಿಸ್ ನೀಡಲಾಗಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮಾರ್ಚ್ 26ರಂದು ಪಕ್ಷದಿಂದ ಹೊರ ಹಾಕಲಾಗಿತ್ತು. ಷೋಕಾಸ್ ನೋಟಿಸ್‌ಗೆ ಐವರು ನಾಯಕರು ಉತ್ತರ ನೀಡಿದ್ದರು. ಎರಡು ತಿಂಗಳ ಬಳಿಕ ಇಬ್ಬರು ಶಾಸಕರ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಕೈಗೊಂಡಿದ್ದಾರೆ.
ಷೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಕೇಂದ್ರ ಶಿಸ್ತು ಸಮಿತಿ ಪರಿಗಣಿಸಿದೆ. ಆದರೆ, ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದೀರಿ’ ಎಂದು ಪಾಠಕ್ ತಿಳಿಸಿದ್ದಾರೆ.
ಹೆಬ್ಬಾರ ಹಾಗೂ ಸೋಮಶೇಖರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. 2019ರ ಜುಲೈ ತಿಂಗಳಲ್ಲಿ ಈ ಇಬ್ಬರು ಶಾಸಕರು ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 16 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಬಳಿಕ ಅಸ್ವಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸೋಮಶೇಖರ್ ಅವರು ಸಹಕಾರ ಹಾಗೂ ಹೆಬ್ಬಾರ ಅವರು ಕಾರ್ಮಿಕ ಸಚಿವರಾಗಿದ್ದರು.
ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಇಬ್ಬರೂ ನಾಯಕರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದರು. 2024ರ ಫೆಬ್ರುವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪಕ್ಷವು ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಸೋಮಶೇಖರ್ ಅಡ್ಡ ಮತ ಚಲಾಯಿಸಿದ್ದರು. ಹೆಬ್ಬಾರ ಗೈರಾಗಿದ್ದರು. ‘ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಬಲ ನೀಡುವವರಿಗೆ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ’ ಎಂದು ಸೋಮಶೇಖರ್ ತಿಳಿಸಿದ್ದರು.
ಶಾಸಕರಿಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಪ್ರಮುಖರ ಸಭೆಯು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿತ್ತು. ಆದರೆ, ಪಕ್ಷದ ವರಿಷ್ಠರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶಿಸ್ತುಕ್ರಮ ಕೈಗೊಳ್ಳುವಂತೆ ಸೋಮಶೇಖರ್ ಹಾಗೂ ಹೆಬ್ಬಾರ ಸವಾಲು ಹಾಕಿದ್ದರು. ಕೇಂದ್ರದ ವರಿಷ್ಠರನ್ನು ಭೇಟಿ ಮಾಡಿದ್ದ ವಿಜಯೇಂದ್ರ ಅವರು, ಭಿನ್ನಮತೀಯ ಶಾಸಕರ ವಿರುದ್ಧ ಕೂಡಲೇ ಶಿಸ್ತುಕ್ರಮ ಕೈಗೊಂಡು ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದ್ದರು. ಪಕ್ಷದಲ್ಲಿ ಭಿನ್ನಮತ ತಾರಕಕ್ಕೆ ಏರಿತ್ತು. ಭಿನ್ನರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಪಕ್ಷವು ಮಾರ್ಚ್‌ನಲ್ಲಿ ಚಾಲನೆ ನೀಡಿತ್ತು. ಷೋಕಾಸ್ ನೋಟಿಸ್ ಕೊಟ್ಟ ಎರಡು ತಿಂಗಳ ಬಳಿಕ ಭಿನ್ನಮತೀಯ ಶಾಸಕರಿಬ್ಬರನ್ನು ಪಕ್ಷದಿಂದ ಹೊರದಬ್ಬಲಾಗಿದೆ.
ಅತ್ಯಾಚಾರ ಮಾಡಿದವರನ್ನು ಬಿಜೆಪಿ ಉಚ್ಚಾಟನೆ ಮಾಡಲ್ಲ. ನನ್ನ ಪರ ಮಾತನಾಡಲು ಬಿಜೆಪಿಯಲ್ಲಿ ಯಾರಿಗೂ ಧೈರ್ಯ ಇಲ್ಲ. ಈಗ ಸ್ವತಂತ್ರವಾಗಿರುವೆಎಸ್.ಟಿ. ಸೋಮಶೇಖರ್ ಯಶವಂತಪುರ ಶಾಸಕ
ಮುನಿರತ್ನನನ್ನು ಏಕೆ ಉಚ್ಚಾಟನೆ ಮಾಡಿಲ್ಲ? ಸೋಮಶೇಖರ್ ಆಗಲಿ, ಹೆಬ್ಬಾರ ಅವರಾಗಲಿ, ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಪಕ್ಷದ ಶಿಸ್ತು, ತತ್ವ, ಸಿದ್ಧಾಂತ ಮತ್ತು ನಾಯಕತ್ವಕ್ಕೆ ಎಲ್ಲರೂ ಬದ್ಧರಾಗಿರಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕೇಂದ್ರ ಶಿಸ್ತು ಸಮಿತಿ ನಿರ್ಧಾರ ತೆಗೆದುಕೊಂಡಿದೆಬಿ.ಎಸ್. ಯಡಿಯೂರಪ್ಪಕೇಂದ್ರ ಸಂಸದೀಯ ಮಂಡಳಿ ಸದಸ್ಯ
ಇಬ್ಬರು ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಘಟಕ ಕೋರಿತ್ತು. ಅವರ ಉಚ್ಚಾಟನೆಗೆ ಡಿ.ಕೆ. ಶಿವಕುಮಾರ್ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.