ADVERTISEMENT

ಸರ್ದಾರ್ ಪಟೇಲ್ ವ್ಯಕ್ತಿತ್ವ ಪರಿಚಯಿಸಲು ಬಿಜೆಪಿಯಿಂದ 'ಏಕತಾ ನಡಿಗೆ'

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 16:00 IST
Last Updated 13 ಅಕ್ಟೋಬರ್ 2025, 16:00 IST
   

ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವ್ಯಕ್ತಿತ್ವವನ್ನು ಯುವ ಜನರಿಗೆ ಪರಿಚಯಿಸಲು ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಏಕತಾ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಪಟೇಲ್ ಅವರ ಕುರಿತ ಮಾಹಿತಿ ಯುವ ಜನರಿಗೆ ತಲುಪಿಸುವಲ್ಲಿ ಸರ್ಕಾರಗಳು ಎಡವಿವೆ ಎಂಬ ಭಾವನೆ ಜನರಲ್ಲಿದೆ. ಆದ್ದರಿಂದ ದೇಶವ್ಯಾಪಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಟೇಲ್ ಅವರ ಜೀವನ-ಆದರ್ಶಗಳ ಕುರಿತು ಚರ್ಚಾ ಸ್ಪರ್ಧೆ, ವಿಚಾರಸಂಕಿರಣ, ಪ್ರಬಂಧ ಸ್ಪರ್ಧೆ, ಪಟೇಲ್ ಅವರ ಸಾಧನೆಗಳ ಕುರಿತು ರೀಲ್ಸ್‌ ಮಾಡಲು ಅವಕಾಶವಿದೆ. ರೀಲ್ಸ್‌ ಅನ್ನು ಮೈಭಾರತ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಅವರು ವಿವರಿಸಿದರು.

ADVERTISEMENT

ಇದೇ 31ರಿಂದ ನವೆಂಬರ್‌ 25ರವರೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 8ರಿಂದ 10 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಜನ ಸಮೂಹವನ್ನು ತಲುಪಲಾಗುವುದು. ಇದರಲ್ಲಿ ಲೋಕಸಭಾ ಸದಸ್ಯರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದರು.

‘ಸ್ವದೇಶಿ ವಸ್ತುಗಳ ಬಳಕೆ ಮಾಡುವ ಪ್ರತಿಜ್ಞೆ ಸ್ವೀಕಾರ ನಡೆಯಲಿದೆ. ಸ್ವದೇಶಿ ಮೇಳಗಳ ಆಯೋಜನೆಯೂ ನಡೆಯಲಿದೆ. ಯೋಗ ಮತ್ತು ಆರೋಗ್ಯ ಶಿಬಿರಗಳನ್ನೂ ಆಯೋಜಿಸಲಿದ್ದೇವೆ. ಇದರಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನೂ ತೊಡಗಿಸಿಕೊಳ್ಳಲಾಗುವುದು. ಮಾಲ್‌, ಉದ್ಯಾನವನಗಳು ಸೇರಿದಂತೆ ಯುವಜನ ಸೇರುವ ಸ್ಥಳಗಳಲ್ಲಿ ಸರ್ದಾರ್‌ ಪಟೇಲ್‌ ಅವರ ಜೀವನ ಕುರಿತಾದ ಬೀದಿ ನಾಟಕಗಳನ್ನೂ ಆಯೋಜಿಸಲಾಗಿದೆ’ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ 5 ಜನ ಯುವಕರಿಗೆ ರಾಷ್ಟ್ರೀಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಲಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.