
ಬೆಂಗಳೂರು: ‘ಭ್ರಷ್ಟಾಚಾರ ಮತ್ತು ಹಗರಣಗಳಿಂದ ಕುಖ್ಯಾತಿ ಪಡೆದಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಆದ್ದರಿಂದ ಈ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಆ ಪಕ್ಷದ ನಾಯಕರು ಸಂಕಲ್ಪ ಮಾಡಿದರು.
ಸಭೆ ಉದ್ಘಾಟಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ‘ಇದು ಸಂಘಟನಾತ್ಮಕ ಸಭೆಯಲ್ಲ. ಕರ್ನಾಟಕದ ಇಂದಿನ ಸ್ಥಿತಿಯ ಆತ್ಮಾವಲೋಕನ ಸಭೆ. ಭ್ರಷ್ಟ ಸರ್ಕಾರವನ್ನು ತೊಲಗಿಸಿ ಅಧಿಕಾರ ಮರಳಿ ಪಡೆಯುವ ಸಂಕಲ್ಪದ ಸಭೆ’ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲ ನಾಯಕರೂ ಧ್ವನಿಗೂಡಿಸಿದರು.
ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಮುಡಾ ಸೇರಿ ಹವಲು ಹಗರಣಗಳು ನಡೆದಿವೆ. ನೆರೆಯ ರಾಜ್ಯಗಳ ಚುನಾವಣೆಗೆ ಇಲ್ಲಿಂದ ಸರ್ಕಾರದ ಹಣವನ್ನು ಸಾಗಿಸಲಾಗಿದೆ. ಇದರ ವಿರುದ್ಧ ಪಕ್ಷದ ವತಿಯಿಂದ ಪಾದಯಾತ್ರೆ ಮತ್ತು ಹೋರಾಟ ನಡೆದಿದೆ. ರಾಜ್ಯದ ಜನರ ಹಿತಕ್ಕಿಂತ ಅಧಿಕಾರ ಹಿಡಿದ ದಿನದಿಂದಲೂ ಕಾಂಗ್ರೆಸ್‌ನಲ್ಲಿ ಒಳಜಗಳ ಆರಂಭವಾಗಿದೆ. ಈಗಲೂ ನಿಂತಿಲ್ಲ. ಇದು ಮತ ಹಾಕಿ ಗೆಲ್ಲಿಸಿರುವ ಜನರಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದರು.
‘ಮುಂಬರುವ ಸ್ಥಳೀಯ ಸಂಸ್ಥೆಗಳ ಮತ್ತು ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು. ಇದು ಪರೀಕ್ಷೆಯ ಕಾಲವಾಗಿದ್ದು, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ಸಿನ ವೈಫಲ್ಯಗಳನ್ನು ತಿಳಿಸಬೇಕು’ ಎಂದು ಶೇಖಾವತ್ ಸಲಹೆ ನೀಡಿದರು.
‘ಸಿದ್ದರಾಮಯ್ಯ ಸರ್ವಾಧಿಕಾರಿ’
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಕಳೆದ ಎರಡೂ ಮುಕ್ಕಾಲು ವರ್ಷದಲ್ಲಿ ಸಿದ್ದರಾಮಯ್ಯ ಅವರು ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದ್ದು, ಅವರ ವಿರುದ್ಧ ಕಾಂಗ್ರೆಸ್ ಶಾಸಕರೇ ದಂಗೆ ಎದ್ದಿದ್ದಾರೆ’ ಎಂದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮೈಸೂರು ಮಾದಕ ದ್ರವ್ಯಗಳ ಉತ್ಪಾದನಾ ಕೇಂದ್ರವಾಗಿ ಪರಿಣಮಿಸಿದೆ. ಯಲ್ಲಾಪುರದ ದಲಿತ ಮಹಿಳೆ ಹತ್ಯೆ, ಕೊಪ್ಪಳದಲ್ಲಿ ದಲಿತ ವ್ಯಕ್ತಿಯ ಹತ್ಯೆ ಆದರೂ ಪರಿಹಾರ ನೀಡಿಲ್ಲ ಕೇವಲ ಮುಸ್ಲಿಂ ಓಲೈಕೆಯೊಂದೇ ಸರ್ಕಾರದ ಆದ್ಯತೆ ಆಗಿದೆ ಎಂದು ಕಿಡಿಕಾರಿದರು.
2028ರ ಚುನಾವಣೆಗೆ ಬಹಳ ದೂರ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ನಾವು ಹಗಲು- ರಾತ್ರಿ ಶ್ರಮ ಹಾಕಬೇಕು. ಮುಂಬರುವುದು ಚುನಾವಣೆ ದಿನಗಳು.ಸರಣಿ ಚುನಾವಣೆ ಗೆಲ್ಲಲು ಕಾರ್ಯಕರ್ತರು ಸಜ್ಜಾಗಬೇಕಾಗಿದೆ ಎಂದು ವಿಜಯೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿದ್ದರು. ಕಾರ್ಯಕಾರಿಣಿಯಲ್ಲಿ 1,500 ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಬಿಎಸ್‌ವೈ ಸಮರ್ಥ ನಾಯಕ
‘ದೇಶದ ಮಟ್ಟದಲ್ಲಿ ಪಕ್ಷಕ್ಕೆ ಮೋದಿ ಸಮರ್ಥ ನಾಯಕತ್ವ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸಮರ್ಥ ನಾಯಕತ್ವ ನೀಡಿದ್ದರು. ಯಡಿಯೂರಪ್ಪ ನಮಗೆ ಆದರ್ಶಪ್ರಾಯರು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಯಡಿಯೂರಪ್ಪನವರನ್ನು ಅಭಿನಂದಿಸಿ ಮಾತನಾಡಿದ ಅವರು ‘ಚುನಾವಣಾ ತಂತ್ರಗಾರಿಕೆಯಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಆಡಳಿತದಲ್ಲೂ ದೂರದೃಷ್ಟಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದರು. ನಮ್ಮ ಪಕ್ಷವನ್ನು ಕರ್ನಾಟಕದಲ್ಲಿ ಉತ್ತುಂಗಕ್ಕೆ ಏರಿಸಿದವರು’ ಎಂದು ಸ್ಮರಿಸಿದರು.
ನಿರ್ಣಯಗಳು
ಬ್ರಾಂಡ್ ಬೆಂಗಳೂರನ್ನು ಕಸದ ಗುಂಡಿ ಬೆಂಗಳೂರನ್ನಾಗಿ ಮಾಡಿದೆ. ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ನಗರವನ್ನು ಚಿನ್ನದ ತಟ್ಟೆಯಲ್ಲಿ ಬಳುವಳಿಯಾಗಿ ನೀಡಿದೆ. ರಸ್ತೆ ಕಸ ಸಂಚಾರ ಮತ್ತು ಭ್ರಷ್ಟಾಚಾರ ಸಮಸ್ಯೆಗಳ ಪರಿಹಾರಕ್ಕೆ ಕಾಲಬದ್ಧ ಯೋಜನೆ ರೂಪಿಸಬೇಕು.
ಎಸ್‌ಸಿ ಎಸ್‌ಪಿ– ಟಿಎಸ್‌ಪಿಯ ₹42000 ಕೋಟಿಯನ್ನು ಗ್ಯಾರಂಟಿ ಮತ್ತು ಅನ್ಯ ಉದ್ದೇಶಗಳಿಗೆ ಬಳಸಿದ್ದಾರೆ. ಆ ಹಣವನ್ನು ವಾಪಸ್ ಪಡೆದು ಎಸ್‌ಸಿ–ಎಸ್‌ಟಿ ಸಮುದಾಯದ ಕಲ್ಯಾಣಕ್ಕೆ ಬಳಸಬೇಕು. ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಇದರಲ್ಲಿ ಪರಿಶಿಷ್ಟರಿಗೆ ಸಿಗಬೇಕಾಗಿರುವ 142500 ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು.
ಸಿದ್ದರಾಮಯ್ಯ ನೇತೃತ್ವದ ನಿಷ್ಕ್ರಿಯ ನಿಷ್ಪ್ರಯೋಜಕ ಭ್ರಷ್ಟಸರ್ಕಾರ ಒಂದು ಸಾವಿರ ವರ್ಷ ಪೂರೈಸಿದೆ. ಆದರೆ ಇವರ ಸಾಧನೆ ಜಾಹೀರಾತಿಗೆ ಸೀಮಿತವಾಗಿದೆ. ರಾಜ್ಯದ ಜನತೆ ಇದನ್ನು ನಿರ್ಲಕ್ಷಿಸಿದ್ದಾರೆ. ಇದು ಕುಸಿದಿರುವ ಜನಪ್ರಿಯತೆಗೆ ಸಾಕ್ಷಿ.
‘ಮೈತ್ರಿ ಬಗ್ಗೆ ಬಹಿರಂಗ ಚರ್ಚೆ ಬೇಡ’
'ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಕುರಿತು ಯಾರೂ ಬಹಿರಂಗ ಹೇಳಿಕೆಗಳನ್ನು ನೀಡುವುದು ಬೇಡ' ಎಂದು ಪಕ್ಷದ ಪ್ರಮುಖರ ಸಮಿತಿ ಸಭೆ ತೀರ್ಮಾನ ತೆಗೆದುಕೊಂಡಿದೆ. ಕಾರ್ಯಕಾರಿಣಿ ಸಭೆಯ ಬಳಿಕ ಪ್ರಮುಖರ ಸಮಿತಿ ಸಭೆ ನಡೆಯಿತು. ಆದಷ್ಟು ಬೇಗ ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ ಕರೆದು ಗೊಂದಲವನ್ನು ನಿವಾರಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಬಿ.ವೈ.ವಿಜಯೇಂದ್ರ ಬಿ.ಎಸ್.ಯಡಿಯೂರಪ್ಪ. ಪ್ರಲ್ಹಾದ ಜೋಶಿ ಆರ್.ಅಶೋಕ ಛಲವಾದಿ ನಾರಾಯಣಸ್ವಾಮಿ ಡಿ.ವಿ.ಸದಾನಂದಗೌಡ ಗೋವಿಂದ ಕಾರಜೋಳ ಬಿ.ಶ್ರೀರಾಮುಲು ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.