ADVERTISEMENT

ಬಿಜೆಪಿ ಭಾರತೀಯ ಯೋಧರ ಸಾವು ಬಯಸುತ್ತದೆ: ಕಾಂಗ್ರೆಸ್‌ ಗಂಭೀರ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2021, 14:47 IST
Last Updated 9 ಜುಲೈ 2021, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಬ್ಬೊಬ್ಬ ಯೋಧನ ಹೆಣ ಬಿದ್ದರೂ ಒಂದೊಂದು ಮತ ಬೀಳುತ್ತದೆ ಎಂದು ಯೋಚಿಸುವ ವಿಕೃತ ಮನಸ್ಥಿತಿಯ ಬಿಜೆಪಿ ತನ್ನ ರಾಜಕೀಯ ಲಾಭಕ್ಕೋಸ್ಕರ ಭಾರತೀಯ ಯೋಧರ ಸಾವು ಬಯಸುತ್ತದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

ಪಕ್ಷದ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ವಿಚಾರವಾಗಿ ದೇಶದ ಯೋಧರನ್ನು ಎಳೆದು ತಂದಿರುವ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಅತ್ಯಂತ ಕೀಳುಮಟ್ಟದಲ್ಲಿ ಕಿತ್ತಾಡುತ್ತಿವೆ.

ಕಾರ್ಕಳದ ಕಾಂಗ್ರೆಸ್‌ ಕಾರ್ಯಕರ್ತ ರಾಧಾಕೃಷ್ಣ ನಾಯಕ್‌ ಮೇಲೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಭಾರತೀಯ ಸೈನಿಕರ ಸಾವು ಬಯಸುವ ವ್ಯಕ್ತಿಯ ಪರವಾಗಿ ಕಾಂಗ್ರೆಸ್‌ ಪಕ್ಷದ ನಾಯಕರು ನಿಲ್ಲುತ್ತಾರೆ ಎಂದಿತ್ತು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ADVERTISEMENT

ಪಾಕ್ ಉಗ್ರರೊಂದಿಗೆ ಶಾಮೀಲಾಗಿದ್ದ ದೇವಿಂದರ್ ಸಿಂಗ್ ಎಂಬ ಪೊಲೀಸ್ ಅಧಿಕಾರಿಗೆ ಕೇಂದ್ರ ಬಿಜೆಪಿ ಸರ್ಕಾರ ಬಡ್ತಿ ಹಾಗೂ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದು ಅದೇ ಕಾರಣಕ್ಕಾಗಿ ಎಂದು ರಾಜ್ಯ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಸರಣಿ ಟ್ವೀಟ್‌ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ರಾಧಾಕೃಷ್ಣ ತಮ್ಮ ಹೆಸರಿನಲ್ಲಿ ನಕಲಿ ಖಾತೆ ಬಗ್ಗೆ ದೂರು ನೀಡಿದ್ದರೂ ಆ ಬಗ್ಗೆ ಪೊಲೀಸರು ತನಿಖೆ ನಡೆಸಿಲ್ಲ ಏಕೆ? ಎಂದಿದೆ.

ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರನ್ನು ಬಿಲ್ಡಪ್‌ ಬೊಮ್ಮಾಯಿ ಎಂದು ಜರಿದಿರುವ ಕಾಂಗ್ರೆಸ್‌, ಆ ಪೋಸ್ಟಿನ ಯುಆರ್‌ಎಲ್‌ ಪಡೆಯದಷ್ಟು ಅಸಮರ್ಥರೇ ಪೊಲೀಸರು? ಎಂದು ಪ್ರಶ್ನಿಸಿದೆ.

ಸಾಕ್ಷ್ಯವಿಲ್ಲದ ಸುಳ್ಳು ಪ್ರಕರಣಕ್ಕೆ ರಾಧಾಕೃಷ್ಣರನ್ನು ಒಂದು ವರ್ಷದ ಬಳಿಕ ಠಾಣೆಗೆ ಕರೆಸಿದ್ದೇಕೆ? ಕರೆಸಿದ ನಂತರ ಅಮಾನವೀಯ ಹಲ್ಲೆ ಮಾಡುವಂತಹ ಪ್ರಮೇಯವೇನು? ಬಿಜೆಪಿ ಶಾಸಕ ಪೊಲೀಸರನ್ನು ಪ್ರಚೋದಿಸಿದ್ದೇಕೆ? ಸಾಕ್ಷ್ಯವಿದ್ದರೆ ಪ್ರಕರಣವನ್ನು ಕೋರ್ಟ್ ನೋಡಿಕೊಳ್ಳುತ್ತದೆ, ಪೊಲೀಸರಿಗೆ ಆತನ ಮೇಲೆ ಹಲ್ಲೆ ಮಾಡುವ ಅಧಿಕಾರ ಕೊಟ್ಟವರಾರು? ಎಂದು ಹಲವು ಪ್ರಶ್ನೆಗಳನ್ನು ಕಾಂಗ್ರೆಸ್‌ ಮುಂದಿಟ್ಟಿದೆ.

ಮಧ್ಯಪ್ರದೇಶದಲ್ಲಿ ಐಎಸ್‌ಐ ಪರ ಕೆಲಸ ಮಾಡುತ್ತಿದ್ದ ಬಂಧಿತರೂ ಬಿಜೆಪಿಗರೇ. ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದವರೂ ಅವರೇ. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರೂ ಅವರೇ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಕಿತ್ತ ದೀಪ್ ಸಿದು ಬಿಜೆಪಿ ಬೆಂಬಲಿಗನೇ. ತಾವು ಅಮೇದ್ಯ ತಿಂದು ಇತರರತ್ತ ತೋರಿಸುವ ವಿಕೃತ ಚಾಳಿ ಬಿಜೆಪಿಯದ್ದು ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ನಲ್ಲಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.