ADVERTISEMENT

ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾದರೆ ಗಂಭೀರ ಪರಿಣಾಮ: ಸಿದ್ದರಾಮಯ್ಯ ಎಚ್ಚರಿಕೆ

ಬಿಜೆಪಿ ಸರ್ಕಾರ ಅನೈತಿಕ ಶಿಶು ಎಂದು ಟೀಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 8:36 IST
Last Updated 28 ಆಗಸ್ಟ್ 2019, 8:36 IST
   

ಬೆಳಗಾವಿ:ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಎಚ್ಚರಿಕೆ ನೀಡಿದರು.

ಇಲ್ಲಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಗೆ ರಾಜ್ಯದ್ದು ₹2.34 ಲಕ್ಷ ಕೋಟಿ ಬಜೆಟ್ ಇದೆ. ಅದರಲ್ಲಿ ₹ 400 ಕೋಟಿ ಕೊಡುವುದು ಕಷ್ಟವಾದರೆ ಬಡವರ ಬಗ್ಗೆ ಯಾವ ಕಾಳಜಿ ಇದೆ ಅವರಿಗೆ? ಕೂಡಲೇ ಅನುದಾನ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್ ವಿಚಾರವಾಗಿ ಬಿಬಿಎಂಪಿ ಆಯುಕ್ತರ ಬಳಿ ಮಾತನಾಡಿದ್ದೇನೆ. ಸರ್ಕಾರ ಅನುದಾನ ಕೊಡಲ್ಲ‌ ಅಂತ ಹೇಳಿದೆ ಎಂದು ತಿಳಿಸಿದರು. ಸರ್ಕಾರದ ನಡೆ ಸರಿಯಲ್ಲ. ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ಇರುವುದಿಲ್ಲ. ಸರ್ಕಾರವೇ ಅನುದಾನ ಕೊಡಬೇಕು. ಬಹಳ ಮಹತ್ವದ ಕಾರ್ಯಕ್ರಮ ಇದು. ನಿಲ್ಲಿಸಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಅಲ್ಲದೆ,ಇಂದಿರಾ ಕ್ಯಾಂಟೀನ್ ಮುಚ್ಚಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಪತ್ರ ಬರೆಯುತ್ತೇನೆ ಎಂದೂ ತಿಳಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ 2 ಕೆ.ಜಿ. ಅಕ್ಕಿ ಕಡಿತ ಮಾಡುತ್ತೇವೆ ಎಂದಿದ್ದರು. ವಿರೋಧ ಮಾಡಿದ್ದರಿಂದ ಸುಮ್ಮನಾದರು. ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಉಪ ಚುನಾವಣೆ ಬರಲಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ವೀಕ್ಷಕರ ವರದಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರವು ರಾಜ್ಯಕ್ಜೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರೈತರು, ಬಡವರ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ. ಪ್ರವಾಹ ಬಂದು 20 ದಿನಗಳಾದರೂ ಅನುದಾನ ಕೊಟ್ಟೇ ಇಲ್ಲ. ಈಗ ಕೇಂದ್ರ ಅಧ್ಯಯನ ತಂಡ ಬಂದು ಹೋಗಿದೆ. ವರದಿ ಕೊಟ್ಟ ಮೇಲೆ ಅನುದಾನ ಬಿಡುಗಡೆ ಆಗುತ್ತದೆ. ಅಲ್ಲಿವರೆಗೆ ಕಾಯದೇ ತುರ್ತಾಗಿ ₹ 5 ಸಾವಿರ ಕೋಟಿ‌ ಕೊಡಬೇಕಿತ್ತು. ಪ್ರಧಾನಿ ವೈಮಾನಿಕ ಸಮೀಕ್ಷೆಯನ್ನಾದರೂ ಮಾಡಬೇಕಿತ್ತು. ವಿದೇಶಕ್ಕೆ ಹೋಗಲು ಅವರಿಗೆ ಸಮಯ ಇದೆ. ಪ್ರವಾಹಪೀಡಿತರಿಗೆ ಸ್ಪಂದಿಸಲು ಸಮಯ ಇಲ್ಲವೇ? ಅವರಿಗೆ ವಿದೇಶಗಳಲ್ಲಿ ಪ್ರಚಾರದ ಹುಚ್ಚು. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಟೀಕಿಸಿದರು.

370ನೇ ವಿಧಿ ರದ್ದುಪಡಿಸುವ ಮುನ್ನ ಯಾರೊಂದಿಗೆ ಚರ್ಚಿಸಿದರು?. ಸರ್ವ ಪಕ್ಷ ಸಭೆ ಕರೆಯಲಿಲ್ಲ. ಜನರನ್ನು ಕೇಳಲಿಲ್ಲ. ಪ್ರಜಾಪ್ರಭುತ್ವ ಕ್ರಮವೇ ಇದು? ಕಾನೂನು ಪ್ರಕಾರ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಪ್ರವಾಹ ಇರುವಾಗ ದೆಹಲಿಗೂ ಬೆಂಗಳೂರಿಗೂ ಓಡಾಡಿಕೊಂಡು ಇದ್ದರೆ ಆಗುತ್ತದೆಯೇ? ಯಡಿಯೂರಪ್ಪ ಅವರಿಗೆ ಗೃಹ ಸಚಿವ ಅಮಿತ್ ಶಾ ಸಮಯವನ್ನೇ ಕೊಡುತ್ತಿಲ್ಲ. ಅವರ ಗಮನಕ್ಕೆ ತರದೇ ಯಡಿಯೂರಪ್ಪ ಏನಾದರೂ ಮಾಡುವುದಕ್ಕೆ ಆಗುತ್ತದೆಯೇ? ನಮ್ಮನ್ನು ಹೈಕಮಾಂಡ್ ಪಕ್ಷ ಎಂದು ಟೀಕಿಸುತ್ತಿದ್ದರು. ಈಗ ಅವರು ಮಾಡುತ್ತಿರುವುದೇನು ಎಂದು ಪ್ರಶ್ನಿಸಿದರು.

ಪ್ರವಾಹ ನಿರ್ವಹಣೆಗೆ ಕೇಂದ್ರ ಸರ್ಕಾರ ಎಷ್ಟು ಅನುದಾನ ನೀಡಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಬಿಜೆಪಿಯ 25 ಸಂಸದರು ಇದ್ದಾರೆ. ಅವರು ಹೋಗಿ ಹಣ ಬಿಡುಗಡೆ ಮಾಡಿಸಬೇಕಿತ್ತಲ್ಲವೇ? ಕೇಂದ್ರದಿಂದ ಇನ್ನೊಂದು ತಂಡ ಬರಬೇಕಾದ ಅಗತ್ಯವಿಲ್ಲ. ಈ ತಂಡ ವರದಿ ಆಧರಿಸಿಯಾದರೂ ಹಣ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಬಿಜೆಪಿಯವರು ವಾಮಮಾರ್ಗ, ಕುದುರೆ ವ್ಯಾಪಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಜನಾದೇಶ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಅನೈತಿಕ ಶಿಶು ಎಂದೂ ಅವರು ಟೀಕಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.