ADVERTISEMENT

ರಾಜ್ಯ ನಾಯಕತ್ವ ಬದಲಾವಣೆ ವಿಚಾರ: ನಾನು ಹೈಕಮಾಂಡ್ ನಿರ್ಧಾರದ ಪರ ಎಂದ ಶಾಸಕ ಬೆನಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 5:58 IST
Last Updated 17 ಜೂನ್ 2021, 5:58 IST
ಬಿಜೆಪಿ ಶಾಸಕ ಅನಿಲ ಬೆನಕೆ
ಬಿಜೆಪಿ ಶಾಸಕ ಅನಿಲ ಬೆನಕೆ   

ಬೆಳಗಾವಿ: ನಾಯಕತ್ವದ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಎಂದು ಇಲ್ಲಿನ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ನಾನು ಯಾರ ಪರವಾಗಿಯೂ ಇಲ್ಲ; ಯಾರ ವಿರೋಧವಾಗಿಯೂ ಇಲ್ಲ. ಹೈಕಮಾಂಡ್ ಹೇಳಿದ ನಾಯಕರ ಜೊತೆ ನಾವು ಇರುತ್ತೇವೆ.‌ ಅದು ಬಿ.ಎಸ್. ಯಡಿಯೂರಪ್ಪ ಇರಬಹುದು ಅಥವಾ ಬೇರೆ ನಾಯಕರೂ ಇರಬಹುದು' ಎಂದು ಪ್ರತಿಕ್ರಿಯಿಸಿದರು.

'ಬಿಜೆಪಿ ಹೈಕಮಾಂಡ್ ಬಹಳ ಶಕ್ತಿಶಾಲಿ ಇದ್ದು, ನಿರ್ಣಯ ಕೈಗೊಳ್ಳುವ ಶಕ್ತಿ ಹೊಂದಿದೆ' ಎಂದರು.

ADVERTISEMENT

'ಪಕ್ಷದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ. ಹಾಗೆಂದು ನಾನೂ ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ. ಭಿನ್ನಾಭಿಪ್ರಾಯ ಇದ್ದರೆ ನೇರವಾಗಿ ಹೈಕಮಾಂಡ್ ಬಳಿ ಹೋಗಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಭಿನ್ನಮತ ವ್ಯಕ್ತಪಡಿಸುವುದು ತಪ್ಪು' ಎಂದು ಹೇಳಿದರು.

'ಅನುದಾನ ಎಲ್ಲ ಶಾಸಕರಿಗೂ ಸಿಗುತ್ತಿದೆ. ಆದರೆ, ಪ್ರಮಾಣ ಕಡಿಮೆ ಇದೆ. ಪ್ರವಾಹ ಬಂದಿತ್ತು. ಕೋವಿಡ್ ಪರಿಸ್ಥಿತಿ ಬಂದಿದೆ. ಹೀಗಾಗಿ ಅನುದಾನ ಕಡಿಮೆ ಆಗಿರಬಹುದು' ಎಂದರು.

'ಎಲ್ಲ ಶಾಸಕರಿಗೂ ಕಡಿಮೆ ಅನುದಾನ ಸಿಗುತ್ತಿದೆ. ಅನುದಾನ ವಿಚಾರದಲ್ಲಿ ತಾರತಮ್ಯದ ಬಗ್ಗೆ ನನಗೆ ಗೊತ್ತಿಲ್ಲ' ಎಂದು ಹೇಳಿದರು.

'ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ತಂದೆಗೆ ಸಹಾಯ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನನಗೇನೂ ಅನಿಸಿಲ್ಲ' ಎಂದು ತಿಳಿಸಿದರು.

'ಬೆಳಗಾವಿ ಶಾಸಕರು ಬುದ್ಧಿವಂತರಿದ್ದೇವೆ. ಹೀಗಾಗಿ ನಮ್ಮ ಬಗ್ಗೆ ರಾಜ್ಯದಾದ್ಯಂತ ಬಹಳ ಚರ್ಚೆಯಾಗುತ್ತದೆ. ರಾಜ್ಯದ ಎಲ್ಲಾ ಶಾಸಕರು ಪ್ರಜ್ಞಾವಂತರಿದ್ದಾರೆ. ವಿಶೇಷವಾಗಿ ಬೆಳಗಾವಿ ಶಾಸಕರು ಡಿಸೈಡಿಂಗ್ ಇರುತ್ತೇವೆ' ಎಂದು ಬೆನಕೆ ಹೇಳಿದರು.

'ಶಾಸಕ ಅಭಯ ಪಾಟೀಲ ಬೇರೊಂದು ಸಭೆಗಾಗಿ ಬೆಂಗಳೂರಿಗೆ ಹೋಗಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.