ADVERTISEMENT

ನಿರೀಕ್ಷೆ ಮಟ್ಟ ತಲುಪದ ಕಟೀಲ್: ಬಲಿಷ್ಠ ಅಧ್ಯಕ್ಷರ ಹುಡುಕಾಟಕ್ಕೆ ಮುಂದಾದ ಬಿಜೆಪಿ?

* ಸಂಘಟನೆಯಲ್ಲಿ ಬದಲಾವಣೆ ಚಿಂತನೆ

ಎಸ್.ರವಿಪ್ರಕಾಶ್
Published 12 ಮಾರ್ಚ್ 2021, 19:31 IST
Last Updated 12 ಮಾರ್ಚ್ 2021, 19:31 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಬೆಂಗಳೂರು: ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಸಂಘಟನಾ ಸಾಮರ್ಥ್ಯಕ್ಕೆ ತಕ್ಕಂತೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಮ್ಮ‌ ಚಾತುರ್ಯ ಪ್ರದರ್ಶಿಸಿ, ಸಂಘಟನೆಗೆ ಬಲ ನೀಡದೇ ಇರುವುದು ಆ ಪಕ್ಷದ ವರಿಷ್ಠರ ಚಿಂತೆಗೆ ಕಾರಣವಾಗಿದೆ.

ಶಿವಕುಮಾರ್‌ ಸದ್ದಿಲ್ಲದೇ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ, ನಳಿನ್ ಮತ್ತು ಅವರ ಹೊಸ ತಂಡ ಇನ್ನೂ ಮೈಕೊಡವಿಕೊಂಡು ಎದ್ದು ನಿಂತಿಲ್ಲ. ಪಕ್ಷದಲ್ಲಿ ಹಿಡಿತ ಹೊಂದಿಲ್ಲ. ಸರ್ಕಾರದ ಜತೆ ಸಮನ್ವಯವೂ ಸಾಧಿಸದೇ ಇರುವುದನ್ನು ವರಿಷ್ಠರು ಗಮನಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಯಡಿಯೂರಪ್ಪ ಅವರ ವಯಸ್ಸು 81 ದಾಟಿರುತ್ತದೆ. ಹಿಂದಿನ ಉತ್ಸಾಹದಲ್ಲಿ ಚುನಾವಣೆಯಲ್ಲಿ ಪಕ್ಷ ಮುನ್ನಡೆಸುವುದು ಕಷ್ಟ. ಪಕ್ಷದ ಉಳಿದ ನಾಯಕರ್‍ಯಾರೂ ಅವರ ಜಾಗವನ್ನು ತುಂಬುವ ಭರವಸೆ ಮೂಡಿಸಿಲ್ಲ. ಚುನಾವಣೆ ಹೊಸ್ತಿಲವರೆಗೆ ಇದೇ ಮಾದರಿಯ ನಾಯಕತ್ವವೇ ಮುಂದುವರಿದರೆ ಕಷ್ಟ ಎಂಬುದು ವರಿಷ್ಠರಿಗೆ ಮನವರಿಕೆ ಆಗಿದೆ. ಹೀಗಾಗಿ, ಸಂಘಟನೆಯ ‘ಸಾರಥಿ’ ನಳಿನ್ ಕಟೀಲ್‌ ಸೇರಿದಂತೆ ಹಲವರ ಬದಲಾವಣೆ ಬಗ್ಗೆ ಆಲೋಚನೆ ಆರಂಭಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್‌ಸಿಂಗ್ ನೇಮಕ ಆದ ಬಳಿಕ ಪಕ್ಷದ ಎಲ್ಲ ವಿದ್ಯಮಾನಗಳ ಬಗ್ಗೆ ತಮ್ಮದೇ ಆದ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಇವರು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಆಪ್ತರೂ ಆಗಿರುವುದರಿಂದ ಪಕ್ಷದಲ್ಲಿ ಭಾರಿ ಬದಲಾವಣೆಯ ಪ್ರಸ್ತಾವನೆಯನ್ನು ಅರುಣ್‌ ಸಿಂಗ್‌ ಮಂಡಿಸಿದರೆ, ಮೋದಿ– ಶಾ ಜೋಡಿ ನಿರಾಕರಿಸುವುದಿಲ್ಲ. ಮುಂದಿನ ಲೋಕಸಭೆಗೆ ಮುನ್ನ ಕರ್ನಾಟಕದಂತಹ ಪ್ರಬಲ ರಾಜ್ಯಗಳಲ್ಲಿ ಮತ್ತೆ ಅಧಿಪತ್ಯ ಸಾಧಿಸುವುದು ಬಿಜೆಪಿಗೆ ಅನಿವಾರ್ಯ. ಹೀಗಾಗಿ ದುರ್ಬಲ ತಂಡ ಕಟ್ಟಿಕೊಂಡು ಹೆಣಗಾಡುವುದು ಕಷ್ಟ ಎಂಬ ನಿಲುವಿಗೆ ವರಿಷ್ಠರು ಬಂದಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

‘ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇವರನ್ನು ಎದುರಿಸುವುದು ಬಿಜೆಪಿಯ ಈಗಿನ ತಂಡಕ್ಕೆ ಕಷ್ಟ. ಸರ್ಕಾರದಲ್ಲಿ ಇರುವವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಸಂಘಟನೆಯಲ್ಲಿ ಇದ್ದವರಿಗೆ ಸಂಘಟನೆಯ ಕುರಿತು ಆಳವಾದ ಜ್ಞಾನವಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸಿ ಮುನ್ನಡೆಸುವ ಶಕ್ತಿಯನ್ನು ಪ್ರದರ್ಶಿಸಿಲ್ಲ. ಸರ್ಕಾರ ಮತ್ತು ಪಕ್ಷದ ಸಂಘಟನೆಯ ಮಧ್ಯೆ ತಾಳಮೇಳವೂ ಇಲ್ಲವಾಗಿದೆ’ ಎನ್ನುತ್ತವೆ ಮೂಲಗಳು.

ಅಧ್ಯಕ್ಷ ನಳಿನ್‌ ಮೂಲಕ ರಾಜ್ಯ ಬಿಜೆಪಿಯನ್ನು ಬಿ.ಎಲ್.ಸಂತೋಷ್‌ ಅವರೇ ನಿಯಂತ್ರಿಸುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ, ನಳಿನ್‌ ಅವರನ್ನು ಮುಂದಿಟ್ಟುಕೊಂಡು ಹೋದರೆ ಚುನಾವಣೆ ಎದುರಿಸುವುದು ಸುಲಭವಲ್ಲ’ ಎಂಬ ಮಾತು ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.

ಪಕ್ಷದಲ್ಲಿ ಯಡಿಯೂರಪ್ಪ ಮತ್ತು ದಿವಂಗತ ಎಚ್‌.ಎನ್‌. ಅನಂತಕುಮಾರ್‌ ಅವರ ಬೆಂಬಲಿಗರೆಂದು ಗುರುತಿಸಿ
ಕೊಂಡವರಲ್ಲಿ ಬಹುತೇಕ ಎಲ್ಲರನ್ನು ಪಕ್ಷದ ಕಚೇರಿಯಿಂದಲೇ ಹೊರಹಾಕಲಾಗಿದೆ. ಬಿ.ಎಲ್‌.ಸಂತೋಷ್‌ ಆಪ್ತರೆನಿಸಿಕೊಂಡವರು ಈಗ ಪಕ್ಷದ ರಾಜ್ಯ ಘಟಕದ (ಜಗನ್ನಾಥ ಭವನ) ಕಚೇರಿಯ ಹಿಡಿತ ಸಾಧಿಸಿದ್ದಾರೆ ಎನ್ನುತ್ತಾರೆ ಈ ಎರಡೂ ಬಣಗಳಲ್ಲಿ ಗುರುತಿಸಿಕೊಂಡಿದ್ದವರು.

ಅಲ್ಲದೆ, ಪಕ್ಷದ ಕಚೇರಿಯಲ್ಲಿ ಕಾರ್ಯನಿರ್ವಹಿಸುವವರು ಮತ್ತು ಕೆಲವು ಪದಾಧಿಕಾರಿಗಳು ವಿಧಾನಸೌಧಕ್ಕೆ ಹೋಗುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಯಾರೆಲ್ಲ ಹೋಗುತ್ತಾರೆ ಎಂಬುದನ್ನು ಗಮನಿಸುವುದಕ್ಕೂ ‘ಮೂರನೇ ಕಣ್ಣು’ ಇಡಲಾಗಿದೆ. ಈ ಹೊಸ ಬೆಳವಣಿಗೆಯಿಂದ ಹಲವು ದಶಕಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.