ADVERTISEMENT

ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ‌ ಪ್ರತಿಪಾದನೆ ಎಂದಿಗೂ ಪ್ರಶ್ನಾರ್ಹ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2021, 11:34 IST
Last Updated 31 ಜುಲೈ 2021, 11:34 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಅಧಿಕಾರದಲ್ಲಿದ್ದಾಗ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸದ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ‌ ಪ್ರತಿಪಾದನೆ ಎಂದಿಗೂ ಪ್ರಶ್ನಾರ್ಹವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ವಿರುದ್ಧ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, 'ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ಇನ್ನೊಬ್ಬರಿಲ್ಲ. ಒಳ ಮೀಸಲು ವಿಚಾರದಲ್ಲಿ ಅವರ ನಿಲುವನ್ನು ಈಗಲಾದರೂ ಸ್ಪಷ್ಟಪಡಿಸಲಿ. ಅಧಿಕಾರದಲ್ಲಿದ್ದಾಗ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸದ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ‌ ಪ್ರತಿಪಾದನೆ ಎಂದಿಗೂ ಪ್ರಶ್ನಾರ್ಹವಾಗಿದೆ' ಎಂದು ಬಿಜೆಪಿ ಹರಿಹಾಯ್ದಿದೆ.

'ತಾನು ಹಿಂದುಳಿದ ವರ್ಗದ ಹೀರೋ ಎಂದು ಬೀಗುತ್ತಿದ್ದ ಸಿದ್ದರಾಮಯ್ಯನವರಿಗೆ ಮೋದಿ ಸರ್ಕಾರ ಹಿಂದುಳಿದ ವರ್ಗದವರಿಗೆ ವೈದ್ಯ ಶಿಕ್ಷಣ ಮೀಸಲು ಹೆಚ್ಚಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸೋನಿಯಾ ಗಾಂಧಿ ಪತ್ರ ಬರೆದಿದ್ದಕ್ಕೆ ಮೀಸಲು ಲಭಿಸಿತು ಎಂದು ಸುಳ್ಳು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ' ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ADVERTISEMENT

ಇದೇ ವೇಳೆ ಕಾಂಗ್ರೆಸ್‌ ಮುಖಂಡ ರಣದೀಪ್‌ ಸುರ್ಜೇವಾಲಾ ವಿರುದ್ಧವೂ ಬಿಜೆಪಿ ವಾಗ್ದಾಳಿ ನಡೆಸಿದೆ.

'ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಶೇ. 27ರಷ್ಟು ಮೀಸಲು ನೀಡುವ ಮೋದಿ ಸರ್ಕಾರದ ನಿರ್ಧಾರವನ್ನು ಸುರ್ಜೇವಾಲಾ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುಪಿಎ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ವಿಚಾರಗಳ ಪ್ರತಿಷ್ಠಾಪನೆಗೆ ಹೊರಟಿರುವುದು ಹಾಸ್ಯಾಸ್ಪದ' ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ಪತ್ರವನ್ನು ಪರಿಗಣಿಸಿ ಅಖಿಲ ಭಾರತ ಕೋಟಾದಡಿ ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇ 27ರಷ್ಟು ಮೀಸಲಾತಿ ಘೋಷಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಸಕಾಲದಲ್ಲಿ ಸರ್ಕಾರವನ್ನು ಎಚ್ಚರಿಸಿದ ಸೋನಿಯಾ ಗಾಂಧಿಯವರಿಗೆ ಕೃತಜ್ಞತೆಗಳು ಎಂದು ಸಿದ್ದರಾಮಯ್ಯ ಶುಕ್ರವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.