ADVERTISEMENT

ತಂತ್ರಗಾರಿಕೆ ಬದಲಿಸಿದ ಬಿಜೆಪಿ ಭಿನ್ನರು: ದೆಹಲಿಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 15:57 IST
Last Updated 4 ಡಿಸೆಂಬರ್ 2025, 15:57 IST
<div class="paragraphs"><p>ದೆಹಲಿಯಲ್ಲಿ ಬಿಜೆಪಿ ಭಿನ್ನರು</p></div>

ದೆಹಲಿಯಲ್ಲಿ ಬಿಜೆಪಿ ಭಿನ್ನರು

   

– ಕುಮಾರ್ ಬಂಗಾರಪ್ಪ ಹಂಚಿಕೊಂಡ ಚಿತ್ರ

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದು ವರ್ಷದಿಂದ ಹೋರಾಟ ಮಾಡಿದ್ದ ಬಿಜೆಪಿ ಭಿನ್ನರು ಇದೀಗ ತಮ್ಮ ತಂತ್ರಗಾರಿಕೆ ಬದಲಿಸಿದ್ದಾರೆ. 

ADVERTISEMENT

‘ಬಿಜೆಪಿಯಲ್ಲಿ ಸಾಮಾನ್ಯವಾಗಿ ಮೂರು ವರ್ಷದ ಅವಧಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಎರಡು ವರ್ಷಗಳು ಕಳೆದಿವೆ. ಇನ್ನೂ ಒಂದು ವರ್ಷದ ಅವಧಿಗೆ ವಿಜಯೇಂದ್ರ ಮುಂದುವರಿಕೆಗೆ ನಮ್ಮ ಅಡ್ಡಿ ಇಲ್ಲ. ಆದರೆ, 2028ರ ವಿಧಾನಸಭಾ ಚುನಾವಣೆಗೆ ಮುನ್ನ ವಿಜಯೇಂದ್ರ ಬದಲಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಮುನ್ನಡೆಸುವವರಿಗೆ ನಾಯಕತ್ವ ನೀಡಬೇಕು‘ ಎಂದು ಭಿನ್ನರು ದಾಳ ಉರುಳಿಸಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಅಥವಾ ಸಂಸದ ಜಗದೀಶ ಶೆಟ್ಟರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. 

ಕಳೆದ ಮೂರು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮೊಕ್ಕಾಂ ಹೂಡಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ. ಹರೀಶ್‌, ಮಾಜಿ ಶಾಸಕರಾದ ಕುಮಾರ್‌ ಬಂಗಾರಪ್ಪ, ಶ್ರೀಮಂತ ಪಾಟೀಲ, ಮುಖಂಡ ಎನ್‌.ಆರ್.ಸಂತೋಷ್‌ ಮತ್ತಿತರರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್‌ ಅಗರವಾಲ್‌ ಅವರನ್ನು ಭೇಟಿ ಮಾಡಿ ತಮ್ಮ ನಿಲುವು ತಿಳಿಸಿದ್ದಾರೆ.

ತಟಸ್ಥರ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿ.ಸೋಮಣ್ಣ, ಸಂಸದರಾದ ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್‌, ಜಗದೀಶ ಶೆಟ್ಟರ್‌ ಮತ್ತಿತರರನ್ನು ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿ, ’ನಾನು ಬಿಜೆಪಿ ಜತೆಗೆ ಇದ್ದೇನೆ. ಆದರೆ, ಭಿನ್ನಮತದ ಜತೆಗೆ ಅಲ್ಲ‘ ಎಂದೂ ಸ್ಪಷ್ಟಪಡಿಸಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್‌ ಬಂಗಾರಪ್ಪ, ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆಯ ಬಳಿಕ ನಾವು ಉತ್ಸಾಹ ಕಳೆದುಕೊಂಡಿಲ್ಲ. ವರಿಷ್ಠರ ಮುಂದೆ ನಮ್ಮ ವಿಚಾರಗಳನ್ನು ತಿಳಿಸಿದ್ದೇವೆ. ಜತೆಗೆ, ಪಕ್ಷ ಸಂಘಟನೆ ಮಾಡುತ್ತಿದ್ದೇವೆ. 2028ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಸಂಘಟನೆಗೆ ಒತ್ತು ಕೊಡುವ ವ್ಯಕ್ತಿಗಳು ನಮಗೆ ಬೇಕು‘ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.