ADVERTISEMENT

ಕಾಂಗ್ರೆಸ್‌ ಚಿಂತನ ಶಿಬಿರದಿಂದ ದೇಶಕ್ಕೇನಾದರೂ ವಿಶೇಷ ವಾರ್ತೆ ಲಭಿಸಿತೆ? –ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2022, 8:20 IST
Last Updated 15 ಮೇ 2022, 8:20 IST
   

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ನೀತಿ ಕುರಿತು ಚರ್ಚೆ ನಡೆದಿದೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ, 'ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆಯಾದರೂ ಏನು?' ಎಂದು ಪ್ರಶ್ನಿಸಿದೆ. ಮುಂದುವರಿದು, 'ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ.ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು ಎಂಬ ಘೋಷಣೆ.ರಾತ್ರಿಯಾಗುತ್ತಲೇ, ಈ ನಿಯಮ ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಅನ್ವಯವಿಲ್ಲ ಎಂದು ರಾಜಿ ಮಾಡಿಕೊಳ್ಳಲಾಯಿತು' ಎಂದು ವ್ಯಂಗ್ಯವಾಗಿ ಕುಟುಕಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುವು ಆ ಕುಟುಂಬಗಳು?ಇಡಿ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ.ಕಾಂಗ್ರೆಸ್ ನೀತಿಯ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ‌ ಬಿಡುವುದಿಲ್ಲ!' ಎಂದು ಚಾಟಿ ಬೀಸಿದೆ.

ADVERTISEMENT

ಹಾಗೆಯೇ,"ಧೃತರಾಷ್ಟ್ರ ಮೋಹ' ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರಬೇಕೆಂದು ಕಾಂಗ್ರೆಸ್ ಬಯಸುತ್ತದೆ!ಏಕೆಂದರೆ ತಮ್ಮ ನಂತರ ತಮ್ಮ ಪಳಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿಯೇ ಇದೆ.ನೆಹರು, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆಗಳು' ಎಂದು ಟೀಕಿಸಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ತೀರ್ಮಾನವನ್ನು ಮೆಚ್ಚಿಕೊಂಡಿರುವ ಬಿಜೆಪಿ, 'ದೇಶವೇ ಬೆರಗುಗಣ್ಣಿನಿಂದ‌ ನೋಡುತ್ತಿದ್ದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರ ಕೈಗೊಂಡು ವಂಶವಾದಕ್ಕೆ ಪೋಷಣೆ ನೀಡದೇ ಬಲಾಢ್ಯರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರು.ಈ ನಿರ್ಧಾರದಿಂದ ಪಕ್ಷಕ್ಕೆ ಸೋಲಾದರೆ ಅದರ ಹೊಣೆ ತಾವೇ ಹೊರುವುದಾಗಿ ಘೋಷಿಸಿದರು.ಕಾಂಗ್ರೆಸ್ ಪಕ್ಷಕ್ಕೆ ಈ ಧೈರ್ಯ ತೋರಿಸುವ ತಾಕತ್ತಿದೆಯೇ?' ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.