ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಆಯೋಜಿಸಿದ ‘ಸಂವಿಧಾನ ದಿನಾಚರಣೆ’ ಅಂಗವಾಗಿ ವಿಧಾನಸೌಧದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಅಂಬೇಡ್ಕರ್ ಪ್ರತಿಕೃತಿ ಮತ್ತು ಸಂವಿಧಾನದ ಪ್ರಸ್ತಾವನೆ ಇದ್ದ ಫಲಕಗಳನ್ನು ತಲೆಮೇಲೆ ಹೊತ್ತು ಸಾಗಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ತನ್ನ ಅಧಿಕಾರಾವಧಿಯ ಉದ್ದಕ್ಕೂ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಲೇ ಬಂದ ಕಾಂಗ್ರೆಸ್, ಈಗ ಅವರ ಚಿತ್ರ ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದೆ. ದಲಿತರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ, ‘ಸಂವಿಧಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮತ ಬ್ಯಾಂಕ್‌ಗಾಗಿ ಯಾವುದೋ ಒಂದು ಸಮುದಾಯವನ್ನು ಯಥೇಚ್ಛವಾಗಿ ಓಲೈಸುವುದು ಸಂವಿಧಾನದ ಸಮಾನತೆಯ ಮೌಲ್ಯಕ್ಕೆ ಧಕ್ಕೆಯಲ್ಲವೇ’ ಎಂದು ಪ್ರಶ್ನಿಸಿದರು.
‘ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಇದನ್ನೇ ಮಾಡಿತು. ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರ ಸಹ ಇದನ್ನೇ ಮಾಡುತ್ತಿದೆ. ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು, ಈಗ ಬೆಲೆ ಏರಿಕೆ ಮಾಡುತ್ತಿದೆ. ಬಸ್ ದರ ಏರಿಕೆ ವಿರುದ್ಧ ಬಿಜೆಪಿ ಹೋರಾಡಲು ಮುಂದಾದಾಗ, ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಂಡಿತು. ಇದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ?’ ಎಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಬಿಜೆಪಿ ಯಾವತ್ತಿಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿಲ್ಲ. ಆದರೆ ಈಗ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ, ದಲಿತರನ್ನು ಅವರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ಬಲಿಯಾಗಿರುವ ದಲಿತರು ಅಮಿತ್ ಶಾ ವಿರುದ್ಧ ಬೀದಿಗೆ ಇಳಿದಿದ್ದಾರೆ. ಸತ್ಯವನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದರು.
ಸಮಿತಿಯ ಅಧ್ಯಕ್ಷ ವೈ.ಸಂಪಂಗಿ, ‘ದಲಿತರು ಈಗಲೂ ಹಿಂದುಳಿದಿದ್ದಾರೆ. ಅವರ ಸಬಲೀಕರಣಕ್ಕೆ ದುಡಿಯದೆ, ಅಂಬೇಡ್ಕರ್ ಅವರ ಚಿತ್ರವನ್ನು ಹೊತ್ತು ತಿರುಗಿದರೆ ಏನೂ ಆಗುವುದಿಲ್ಲ’ ಎಂದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಬಾಯಿತಪ್ಪಿ ಆಡಿದ ಮಾತನ್ನೇ ಕಾಂಗ್ರೆಸ್ ದೊಡ್ಡದು ಮಾಡುತ್ತಿದೆ. ಅದಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದೆ.–ಎನ್.ಮಹೇಶ್ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.