ADVERTISEMENT

ಡಿಸೆಂಬರ್ ಅಂತ್ಯದಲ್ಲಿ ರಾಜಕೀಯ ಧ್ರುವೀಕರಣ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 12:37 IST
Last Updated 3 ಸೆಪ್ಟೆಂಬರ್ 2022, 12:37 IST
ಸಿ.ಟಿ. ರವಿ (ಸಂಗ್ರಹ ಚಿತ್ರ)
ಸಿ.ಟಿ. ರವಿ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ‘ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ಧ್ರುವೀಕರಣ ಆಗಲಿದ್ದು, ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನೀತಿ, ನಿಯತ್ತು ಮತ್ತು ನೇತೃತ್ವ ಇಲ್ಲದ ಯಾವುದೇ ಪಕ್ಷ ಜಗತ್ತಿನ ಭೂಪಟದಲ್ಲಿ ಇರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಈಗಿನ ಕಾಂಗ್ರೆಸ್‌ಗೆ ಬಂದಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣವೇ ನಿಯತ್ತು ಎಂದುಕೊಂಡಿದೆ. ದೇಶದ ಹಿತ ಮತ್ತು ಜನರ ಕಲ್ಯಾಣದ ನಿಯತ್ತಿನ ಅಗತ್ಯವಿದೆ. ಇದ್ಯಾವುದು ಕಾಂಗ್ರೆಸ್'ನಲ್ಲಿ ಇಲ್ಲದಿರುವುದೇ ಅದರ ಅವನತಿಗೆ ಕಾರಣವಾಗಿದೆ' ಎಂದರು.

'ನಿರ್ದಿಷ್ಟ ಯೋಜನೆ ಹಾಗೂ ಕಾರ್ಯತಂತ್ರವಿಲ್ಲದ ಕಾಂಗ್ರೆಸ್ ಜನಮಾನಸದಿಂದ ದೂರ ಆಗುತ್ತಿದೆ. ಪಕ್ಷದ ಹಿರಿ-ಕಿರಿಯ ಮುಖಂಡರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎನ್ನುತ್ತೀರೋ ಅಥವಾ ರಾಜಕೀಯ ಧೃವೀಕರಣ ಎನ್ನುತ್ತೀರೋ ಜನತೆಗೆ ಬಿಟ್ಟಿದ್ದು' ಎಂದು ಮಾರ್ಮಿಕವಾಗಿ ಹೇಳಿದರು.

'ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಬಿಜೆಪಿಯನ್ನು ಬೆಳೆಸಿದ ನಾಯಕ ಅವರು. ಹಾಗೆ, ಬಿಜೆಪಿ ಸಹ ಯಡಿಯೂರಪ್ಪ ಅವರನ್ನು ಬೆಳೆಸಿದೆ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದಿರುವ ಅವರು, ಸದ್ಯದಲ್ಲಿಯೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ರಾಷ್ಟ್ರವಾದ, ವಿಕಾಸವಾದದ ನೆಲೆಯಲ್ಲಿ ಎದುರಿಸಲಿದ್ದೇವೆ' ಎಂದರು.

'ಬಿಜೆಪಿ ಸೀರಿಯಲ್ ಕಿಲ್ಲರ್' ಎನ್ನುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, 'ಆಮ್ ಆದ್ಮಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಪಕ್ಷ. ಆದರೆ, ಇದೀಗ ಅವರೇ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಪಕ್ಷದ ಧ್ಯೇಯದ ಬಗ್ಗೆ ನಿಯತ್ತು ಇಲ್ಲದಿದ್ದರೆ ಹೆಚ್ಚುಕಾಲ ಉಳಿಗಾಲವಿಲ್ಲ. ಅಣಬೆ ಹುಟ್ಟಿದ ಹಾಗೆ ಅದು ಹುಟ್ಟಿದೆ, ಅಷ್ಟೇ ಶೀಘ್ರವಾಗಿ ಅಳಿಯಲಿದೆ' ಎಂದು ವ್ಯಂಗ್ಯವಾಡಿದರು.

ಮುಖಂಡರಾದ ಮಹೇಶ ಟೆಂಗಿನಕಾಯಿ, ಅಶೋಕ ಕಾಟವೆ, ಸಂಜಯ ಕಪಟಕರ, ಚಂದ್ರಶೇಖರ ಗೋಕಾಕ, ವೀರಭದ್ರಪ್ಪ ಹಾಲಹರವಿ, ಪ್ರಭು ನವಲಗುಂದಮಠ ಇದ್ದರು.

ಅಂತಿಮವಾಗಿ ಗೆಲ್ಲುವುದು ಸತ್ಯ: ಸಿ.ಟಿ. ರವಿ

'ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮುರುಘಾ ಶರಣರು ಬಂಧನವಾಗಿ ತನಿಖೆ ಎದುರಿಸುತ್ತಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಅದರ ನಂತರ ಸತ್ಯ ಏನೆಂಬುದು ಜನರಿಗೆ ತಿಳಿಯಲಿದೆ. ಸತ್ಯ ಹೊಸಲು ದಾಟುವ ಮೊದಲು, ಸುಳ್ಳು ಊರೆಲ್ಲ ಸುತ್ತಾಡಿ ಬಂದಿರುತ್ತದೆ. ಅಂತಿಮವಾಗಿ ಗೆಲ್ಲುವುದು ಸತ್ಯವೇ' ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.