
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಪ್ರಾಮಾಣಿಕರಾಗಿದ್ದರೆ ಇ.ಡಿ ತನಿಖೆಗೆ ಯಾಕೆ ಹೆದರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ನಡೆದುಕೊಂಡ ಕಾರಣ ಇ.ಡಿ ನೋಟಿಸ್ ಕೊಟ್ಟಿದೆ. ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಸುಮ್ಮನೇ ಬಿಟ್ಟುಬಿಡಬೇಕೆಂದು ಕಾಂಗ್ರೆಸ್ ಬಯಸುತ್ತದೆಯೇ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವವೇ ಇಲ್ಲ. ಸೋನಿಯಾ ಮತ್ತು ರಾಹುಲ್ ಈ ಎಲ್ಲ ಸಂಸ್ಥೆಗಳಿಗಿಂತಲೂ ಅತೀತರು ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿರುವುದರಿಂದಲೇ ಅವರು ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿದ್ದಾರೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಆಗಲೇ ಸೇರಿಸಬಹುದಿತ್ತು. ಒಂದು ವೇಳೆ ಆ ರೀತಿ ಸೇರಿಸಿದ್ದರೆ, ಈಗ ತನಿಖೆ ಮಾಡಿದರೆ ಸಂವಿಧಾನ ವಿರೋಧಿ ಆಗುತ್ತಿತ್ತು. ಈಗ ಸಂವಿಧಾನ ಬದ್ಧವಾಗಿಯೇ ತನಿಖೆ ನಡೆಯುತ್ತಿದೆ ಎಂದು ರವಿ ಹೇಳಿದರು.
‘ನರೇಂದ್ರಮೋದಿ ಅವರನ್ನು ಎಸ್‌ಐಟಿ ವಿಚಾರಣೆ ಕರೆಸಿದಾಗ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ನೋಡಿ ಕಾಂಗ್ರೆಸ್‌ನವರು ಕಲಿಯಬೇಕಿದೆ. ಸತತ 7 ಗಂಟೆ ತನಿಖೆಗೆ ಹಾಜರಾದರು. ನಿಮ್ಮಂತೆ ನಾಟಕ ಮಾಡಲಿಲ್ಲ, ಜನ ಸೇರಿಸಿ ಪ್ರತಿಭಟನೆ ಮಾಡಲಿಲ್ಲ. ನ್ಯಾಷನಲ್ ಹೆರಾಲ್ಡ್ ಹಣ ದುರುಪಯೋಗ ಪ್ರಕರಣದಲ್ಲಿ ಜನರನ್ನು ಸೇರಿಸಿ ಗದ್ದಲ ಎಬ್ಬಿಸಿ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದು ದೂರಿದರು.
ಸೋನಿಯಾಗಾಂಧಿ ಮತ್ತು ಇತರರು ಜೈಲಿಗೆ ಹೋಗಲಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆಗಳೇ ನಿರ್ಧರಿಸಬೇಕು. ನ್ಯಾಯಾಲಯ ಆ ಕುರಿತು ತಿಳಿಸಬೇಕು. ಜೈಲಿಗೆ ಕಳುಹಿಸುವ ಅಧಿಕಾರ ನನಗಿಲ್ಲ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ ಮತ್ತು ರಾಹುಲ್ ಅಮಾಯಕರಲ್ಲ. ಆಮಾಯಕರಾಗಿದ್ದರೆ, ಶೇ 38 ರಷ್ಟು ಷೇರುಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.