ADVERTISEMENT

ರವಿಕುಮಾರಗೆ ಅವಾಚ್ಯ ಶಬ್ದಗಳಿಂದ ನಿಂದನೆ, ತರಾಟೆ

ಆನಂದ್‌ ಸಿಂಗ್‌ಗೆ ಟಿಕೆಟ್‌ ಕೊಟ್ಟಿರುವುದಕ್ಕೆ ವಿರೋಧ; ಅರ್ಧಕ್ಕೆ ಮೊಟಕುಗೊಂಡ ಸಭೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 22:24 IST
Last Updated 15 ನವೆಂಬರ್ 2019, 22:24 IST
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಅವರ ಭಾಷಣಕ್ಕೆ ಅಡ್ಡಿಪಡಿಸಿ ಅವರೊಂದಿಗೆ ವಾಗ್ವಾದಕ್ಕಿಳಿದಿರುವ ಪಕ್ಷದ ಮುಖಂಡ ಕವಿರಾಜ ಅರಸ್‌ 
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಅವರ ಭಾಷಣಕ್ಕೆ ಅಡ್ಡಿಪಡಿಸಿ ಅವರೊಂದಿಗೆ ವಾಗ್ವಾದಕ್ಕಿಳಿದಿರುವ ಪಕ್ಷದ ಮುಖಂಡ ಕವಿರಾಜ ಅರಸ್‌    

ಹೊಸಪೇಟೆ: ಆನಂದ್‌ ಸಿಂಗ್‌ ಅವರಿಗೆ ವಿಜಯನಗರ ಕ್ಷೇತ್ರದ ಟಿಕೆಟ್‌ ಕೊಡಬಾರದು ಎಂದು ಪಟ್ಟು ಹಿಡಿದುಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಅವರ ಭಾಷಣಕ್ಕೆ ಅಡ್ಡಿಪಡಿಸಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತರಾಟೆಗೆ ತೆಗೆದುಕೊಂಡಿದ್ದರಿಂದ ಶುಕ್ರವಾರ ಇಲ್ಲಿ ಕರೆದಿದ್ದ ಚುನಾವಣಾ ಪೂರ್ವಭಾವಿ ಸಭೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸಭೆಯಲ್ಲಿ ರವಿಕುಮಾರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮಾತನಾಡಲು ಮುಂದಾದಾಗ ಮುಖಂಡರಾದ ಕವಿರಾಜ ಅರಸ್‌, ಜಡೇಶ್‌, ರವಿಚಂದ್ರ, ರಾಮಚಂದ್ರಗೌಡ, ವಿನಾಯಕ ಸ್ವಾಮಿ ಮತ್ತಿತರರು ಎದ್ದು ನಿಂತು, ‘ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಬಗ್ಗೆ ನೀವೇನೂ ನಮಗೆ ಹೇಳಬೇಕಿಲ್ಲ. ನಮಗೆ ಎಲ್ಲವೂ ಗೊತ್ತು. ವಿಜಯನಗರ ಕ್ಷೇತ್ರದ ಟಿಕೆಟ್‌ ಬಗ್ಗೆ ಮಾತಾಡಿ’ ಎಂದು ಪಟ್ಟು ಹಿಡಿದರು. ಆಗ ಸಭೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ಚಪ್ಪಾಳೆ ಹೊಡೆದು ಅವರಿಗೆ ಬೆಂಬಲ ಸೂಚಿಸಿದರು.

‘ಎರಡು ಸಲ ಬಿಜೆಪಿಯಿಂದ ಗೆಲ್ಲಿಸಿದರೂ ಆನಂದ್‌ ಸಿಂಗ್‌ ಪಕ್ಷ ಬಿಟ್ಟು ಹೋದರು. ಅಷ್ಟೇ ಅಲ್ಲ, ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸಿ ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದರು. ಅವರ ಬೆಂಬಲಿಗರು ನಡುರಸ್ತೆಯಲ್ಲಿ ನಿಂತು ‘ಮೋದಿ ಚೋರ್‌ ಹೈ’ ಎಂದು ಘೋಷಣೆ ಕೂಗಿದರು. ಪಕ್ಷಕ್ಕೆ ಇಷ್ಟೆಲ್ಲ ಮುಜುಗರ ಮಾಡಿದವರಿಗೆ ಟಿಕೆಟ್‌ ಕೊಡುವುದು ಸರಿಯೇ? ನಮ್ಮನ್ನು ಕಸ ಬಳಿಯುವವರು ಎಂದು ತಿಳಿದುಕೊಂಡಿದ್ದೀರಿ. ಆನಂದ್‌ ಸಿಂಗ್‌ ಬಿಟ್ಟು ಯಾರಿಗಾದರೂ ಟಿಕೆಟ್‌ ಕೊಡಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದರು.

ADVERTISEMENT

‘ಈ ಹಿಂದೆ ಬೆಂಗಳೂರಿನಲ್ಲಿ ಸಭೆ ಕರೆದಾಗ ಆನಂದ್‌ ಸಿಂಗ್‌ಗೆ ಟಿಕೆಟ್‌ ಕೊಡುವುದಿಲ್ಲ ಎಂದು ನೀವೇ ಹೇಳಿದ್ದೀರಿ. ಈಗೇಕೇ ನಿಮ್ಮ ಮಾತಿನಿಂದ ಹಿಂದೆ ಸರಿಯುತ್ತಿದ್ದೀರಿ. ಪಕ್ಷ ಒಂದುವೇಳೆ ಸಿಂಗ್‌ ಅವರನ್ನೇ ಕಣಕ್ಕಿಳಿಸಿದರೆ ಬಂಡಾಯ ಅಭ್ಯರ್ಥಿಯಾಗಿ ಕವಿರಾಜ ನಾಮಪತ್ರ ಸಲ್ಲಿಸುವುದು ಖಚಿತ’ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಇಲ್ಲಿಗೆ ಸಭೆ ಮುಕ್ತಾಯಗೊಂಡಿದ್ದು, ಇನ್ನೂ ಮುಂದೆ ಪಕ್ಷದ ಆಂತರಿಕ ಸಭೆ ನಡೆಯಲಿದೆ. ಮಾಧ್ಯಮದವರು ಹೊರಗೆ ಹೋಗಬಹುದು ಎಂದು ಸಂಚಾಲಕರು ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ‘ಎಲ್ಲರಿಗೂ ಸತ್ಯ ಗೊತ್ತಾಗಲಿ. ಮಾಧ್ಯಮದವರು ಇಲ್ಲೇ ಇರಲಿ’ ಎಂದು ಪತ್ರಕರ್ತರನ್ನು ಕೂರಿಸಿದರು. ಸಭೆಯಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ರವಿಕುಮಾರ ಸಭೆಯಿಂದ ನಿರ್ಗಮಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ, ‘ಸಣ್ಣಪುಟ್ಟ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಬದಲಾದ ಸನ್ನಿವೇಶದಲ್ಲಿ ಪಕ್ಷ ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ’ ಎಂದು ಹೇಳಿದರು. ಸಭೆಗೆ ಆನಂದ್‌ ಸಿಂಗ್‌ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.