ADVERTISEMENT

ಬಿಜೆಪಿ ಮುಖಂಡರು ನರಿಗಳು: ಧರ್ಮಸೇನಾ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 20:59 IST
Last Updated 5 ಜನವರಿ 2023, 20:59 IST
   

ಬಾಗಲಕೋಟೆ: ‘ಬಿಜೆಪಿ ಮುಖಂಡರು ನರಿಗಳು’ ಎಂದು ಕೆಪಿಸಿಸಿ ಪರಿಶಿಷ್ಟ ಘಟಕದ ರಾಜ್ಯ ಅಧ್ಯಕ್ಷ ಆರ್‌. ಧರ್ಮಸೇನಾ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಎಂದದ್ದು ಸರಿಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾಯಿ ನಿಯತ್ತಿನ ಪ್ರಾಣಿ. ನಾಯಿ ಸರಿಯಾಗುವುದಿಲ್ಲ. ಬಿಜೆಪಿಯವರು ನರಿಗಳು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿ ಸರ್ಕಾರ ನಾಯಿಯಂತೆ ನಿಯತ್ತಿನಿಂದ ರಾಜ್ಯದ ಜನತೆ ಕೆಲಸ ಮಾಡದೆ ಮೋಸ ಮಾಡುತ್ತಿದೆ. ಜನರಿಗೆ ನಿಯತ್ತು ತೋರಿಸಿದರೆ ವಿಷಾದ ವ್ಯಕ್ತಪಡಿಸಬಹುದು’ ಎಂದರು.

ADVERTISEMENT

‘ಮುಖ್ಯಮಂತ್ರಿಯನ್ನು ನಾಯಿಮರಿ ಎಂದು ಹೇಳಿಲ್ಲ'

‘ಮುಖ್ಯಮಂತ್ರಿಯನ್ನು ನಾಯಿಮರಿ ಎಂದು ಹೇಳಿಲ್ಲ. ರಾಜ್ಯಕ್ಕೆ ಬೇಕಾದಷ್ಟು ಅನುದಾನ ತರಲು ಕೇಂದ್ರದ ಜೊತೆ ಮಾತನಾಡುವ ಧೈರ್ಯ ಬೇಕು ಎಂದಷ್ಟೆ ಹೇಳಿದ್ದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಪ್ರತಿಕ್ರಿಯಿಸಿದರು.

ಪತ್ರಕರ್ತರ ಜತೆ ಅವರು ಮಾತನಾಡಿದರು. ‘ಲವ್ ಜಿಹಾದ್’ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, 'ನಳಿನ್ ಕುಮಾರ್ ಪೆದ್ದು ಪೆದ್ದಾಗಿ ಮಾತನಾಡಿ ಬಿಜೆಪಿಯ ಜೋಕರ್ ಎನಿಸಿಕೊಂಡಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಲು ಅವರು ಯಾರು? ಜೈಲಿಗೆ ಕಳುಹಿಸುವುದು ನ್ಯಾಯಾಲಯವೇ ಹೊರತು ನಳಿನ್ ಕುಮಾರ್ ಅಲ್ಲ. ಕಾನೂನು ತಿಳಿಯದೆ ಮಾತನಾಡಿ ವಿದೂಷಕನಂತಾ
ಗಿದ್ದಾರೆ’ ಎಂದರು.

ರಾಜಕಾರಣ ಕೀಳು ಮಟ್ಟಕ್ಕೆ ಕೊಂಡೊಯ್ದ ಸಿದ್ದರಾಮಯ್ಯ: ನಡ್ಡಾ

ತುಮಕೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ರಾಜಕಾರಣವನ್ನು ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಬೇಸರವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ದೇಶದ ರಾಜನೀತಿ, ರಾಜಕಾರಣವನ್ನು ಮೇಲು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಸಿದ್ದರಾಮಯ್ಯ ರಾಜಕಾರಣವನ್ನು ಕೀಳು ಮಟ್ಟಕ್ಕೆ ಇಳಿಸಿರುವುದು ದುಃಖಕರ ಸಂಗತಿ’ ಎಂದರು.

‘ಸಿದ್ದರಾಮಯ್ಯ ನಿಜವಾದ ಪಪ್ಪಿ’

ರಾಮನಗರ: ‘ಸಿದ್ದರಾಮಯ್ಯ ಅವರೇ ನಿಜವಾದ ಪಪ್ಪಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಲೇವಡಿ ಮಾಡಿದರು. ‘ಆತ್ಮಸಾಕ್ಷಿ ಇರುವ ಯಾರೇ ಆದರೂ ಒಂದು ಕ್ಷಣವೂ ಕಾಂಗ್ರೆಸ್ ನಲ್ಲಿ ಇರುವುದಿಲ್ಲ. ಇವರಿಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.