ADVERTISEMENT

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಕಟೀಲ್, ಈಶ್ವರಪ್ಪ ಸಹಮತ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:31 IST
Last Updated 6 ಸೆಪ್ಟೆಂಬರ್ 2021, 19:31 IST
   

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಿದ್ದು, ಇದಕ್ಕೆ ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ತಿಳಿಸಿದ್ದಾರೆ.

ಬೊಮ್ಮಾಯಿ ನೇತೃತ್ವದಲ್ಲೇ ವಿಧಾನ
ಸಭೆ ಚುನಾವಣೆ ಎದುರಿಸಲಾಗುವುದು ಎಂದುಇತ್ತೀಚೆಗೆ ದಾವಣಗೆರೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕ ಜಗದೀಶ ಶೆಟ್ಟರ್‌ ಅವರು ಯಡಿ
ಯೂರಪ್ಪ ಜತೆ ಮಾತುಕತೆ ನಡೆಸಿದ್ದರು.

ನವದೆಹಲಿಗೆ ಸೋಮವಾರ ಭೇಟಿ ನೀಡಿದ್ದ ಕೆ.ಎಸ್. ಈಶ್ವರಪ್ಪ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು.

ADVERTISEMENT

ಬಿಎಸ್‌ವೈ ಜತೆ ಪ್ರವಾಸ: ಗಣೇಶ ಹಬ್ಬದ ಬಳಿಕ ಶಾಸಕ ಬಿ.ಎಸ್‌.ಯಡಿಯೂರಪ್ಪ ನಡೆಸಲಿರುವ ರಾಜ್ಯ ಪ್ರವಾಸದಲ್ಲಿ ತಾವೂ ಭಾಗವಹಿಸುವು
ದಾಗಿ ನಳಿನ್‌ ಕಟೀಲ್‌ ತಿಳಿಸಿದರು. ರಾಜ್ಯ ಪ್ರವಾಸದ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.

ವರಿಷ್ಠರು ಪ್ರವಾಸಕ್ಕೆ ಅನುಮತಿ ನೀಡಿಲ್ಲ. ಆದ್ದರಿಂದ ಪ್ರವಾಸ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ನಳಿನ್‌ ಅವರು ಪ್ರವಾಸದ ಕುರಿತಾದ ಗೊಂದಲ ನಿವಾರಿಸಿದ್ದಾರೆ.

ಶಾ ಹೇಳಿಕೆಗೆ ಬೆಂಬಲ : ಈಶ್ವರಪ್ಪ

‘ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂಬ ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಹೇಳಿಕೆಗೆ ನನ್ನ ಆಕ್ಷೇಪ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಹಿಂದೆಲ್ಲ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಹುಮತ ಪಡೆಯಲು ಬಿಜೆಪಿ ವಿಫಲವಾಗಿತ್ತು. ಆ ಕಾರಣ
ದಿಂದಾಗಿ, ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲೇ ಹೋದರೆ ಗೆಲುವು ಸಾಧ್ಯ ಎಂದು ಸಲಹೆ ನೀಡಿದ್ದೆ. ಅದರರ್ಥ ಏನೆಂದರೆ, ಒಬ್ಬನೇ ವ್ಯಕ್ತಿ ಚುನಾವಣೆ ಕಾರ್ಯತಂತ್ರ ರೂಪಿಸುವ ಬದಲು ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಟ್ಟಾಗಿ ಕುಳಿತು ತಂತ್ರಗಾರಿಕೆ ಹೆಣೆದರೆ ಗೆಲುವು ಸಲೀಸು ಎಂಬುದಷ್ಟೆ. ಇದು ಪಕ್ಷದ ಕಾರ್ಯಕರ್ತರ ಮಧ್ಯೆ ಇರುವ ಸಾಮಾನ್ಯ ಅಭಿಪ್ರಾಯವೂ ಆಗಿದ್ದರಿಂದ ಹೀಗೆ ಸಲಹೆ ನೀಡಿದ್ದೆ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.