ADVERTISEMENT

ಹೋರಾಟಕ್ಕೆ ಬಿಜೆಪಿ ಹೈಕಮಾಂಡ್‌ ಸೂಚನೆ

ಸಾಲ ಮನ್ನಾ: ಮೈತ್ರಿ ಸರ್ಕಾರದ ವೈಫಲ್ಯ ಬಿಂಬಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 17:48 IST
Last Updated 19 ಡಿಸೆಂಬರ್ 2018, 17:48 IST

ನವದೆಹಲಿ: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿ ಆರು ತಿಂಗಳು ಕಳೆದರೂ ಕರ್ನಾಟಕದಲ್ಲಿ ರೈತರಿಗೆ ಅದರ ಪ್ರಯೋಜನ ದೊರೆತಿಲ್ಲ ಎಂಬ ವಿಷಯವನ್ನು ಮುಂದಿರಿಸಿ ಹೋರಾಟ ತೀವ್ರಗೊಳಿಸುವಂತೆ ರಾಜ್ಯ ಬಿಜೆಪಿಗೆ ಪಕ್ಷದ ಹೈಕಮಾಂಡ್‌ ಸೂಚಿಸಿದೆ.

ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದ 41 ಲಕ್ಷ ರೈತರ ಸಾಲ ಮನ್ನಾ ಘೋಷಣೆ ಮಾಡಿಯೂ ಕಾಂಗ್ರೆಸ್‌ ಪಕ್ಷ ಕೃಷಿಕರ ನೆರವಿಗೆ ಬಂದಿಲ್ಲ ಎಂಬುದನ್ನೇ ಪ್ರಧಾನವಾಗಿ ಪ್ರಸ್ತಾಪಿಸುವಲ್ಲಿ ರಾಜ್ಯ ಘಟಕ ವಿಫಲವಾಗಿದೆ. ಕೂಡಲೇ ಈ ಕುರಿತು ಕಾರ್ಯ ಪ್ರವೃತ್ತರಾಗಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಳೆದ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿರುವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಇದುವರೆಗೆ ಕೇವಲ 800 ಜನ ರೈತರ ಸಾಲವನ್ನು ಮನ್ನಾ ಮಾಡಿದ್ದಾಗಿ ಹೇಳಿದೆ. ರಾಜ್ಯ ಬಿಜೆಪಿ ಮುಖಂಡರು ಈ ವಿಷಯವನ್ನೇ ಮುಂದಿರಿಸಿ ಪ್ರತಿತಂತ್ರ ರೂಪಿಸಿ ತಕ್ಕ ಉತ್ತರ ನೀಡುವ ಮೂಲಕ ಕಾಂಗ್ರೆಸ್‌ನ ಬಣ್ಣ ಬಯಲು ಮಾಡಬೇಕು ಎಂಬುದು ಹೈಕಮಾಂಡ್‌ ನಿರ್ದೇಶನವಾಗಿದೆ.

ಸಾಲ ಮನ್ನಾ ಘೋಷಣೆ ಮಾಡಿಯೂ ಸರ್ಕಾರ ವಿಫಲವಾಗಿದೆ. ಆದರೂ ರಾಜ್ಯ ಬಿಜೆಪಿ ಮುಖಂಡರು ಈ ಕುರಿತು ನಿರೀಕ್ಷಿತ ಮಟ್ಟದಲ್ಲಿ ಹೋರಾಟ ರೂಪಿಸುತ್ತಿಲ್ಲ ಎಂಬ ದೂರುಗಳು ಬಂದಿದಿರುವುದರಿಂದ ಪಕ್ಷದ ವರಿಷ್ಠರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಸಚಿವರೊಂದಿಗೆ ಭೇಟಿ; ಅಸಮಾಧಾನ:ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿರುವ ಬೆಳವಣಿಗೆಯ ಕುರಿತೂ ವರಿಷ್ಠರು ಕೆಂಡಾಮಂಡಲವಾಗಿದ್ದಾರೆ.

ಯಡಿಯೂರಪ್ಪ ಅವರು ಹೇಳಿಕೆ ನೀಡಿದಂತೆ ಡಿ.ಕೆ. ಶಿವಕುಮಾರ್‌ ಅವರೊಂದಿಗಿನ ಭೇಟಿಯು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೀಮಿತವಾಗಿತ್ತು ಎಂಬುದು ನಿಜವೇ ಆಗಿದ್ದಲ್ಲಿ, ತಮ್ಮ ಪುತ್ರ ಅಥವಾ ಪಕ್ಷದ ಶಾಸಕರನ್ನು ಸಚಿವರ ಭೇಟಿಗೆ ಕಳುಹಿಸಬಹುದಿತ್ತು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಸಚಿವ ಶಿವಕುಮಾರ್ ಜಾರಿ ನಿರ್ದೇಶನಾಲಯ (ಇ.ಡಿ)ದ ತನಿಖೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅವರನ್ನು ಯಡಿಯೂರಪ್ಪ ಭೇಟಿ ಮಾಡಿ ಬಂದಿರುವುದು ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಯಿತು ಎಂದು ಪಕ್ಷದ ಕೆಲವು ಇತರ ರಾಜ್ಯ ಮುಖಂಡರು ದೂರು ಸಲ್ಲಿಸಿದ್ದೇ ಹೈಕಮಾಂಡ್‌ ಕೋಪಕ್ಕೆ ಕಾರಣ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆ ಹಾಗೂ ಇ.ಡಿ ಅಧಿಕಾರಿಗಳು ಈ ಹಿಂದೆ ತಮ್ಮ ಮನೆಗಳ ಮೇಲೆ ದಾಳಿ ನಡೆಸಿದಾಗ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಶಿವಕುಮಾರ್‌ ಅವರು ನೇರವಾಗಿ ಆರೋಪ ಮಾಡಿದ್ದರು. ಆಗಲೂ ರಾಜ್ಯ ಬಿಜೆಪಿ ಮುಖಂಡರು ಮೌನ ವಹಿಸಿದ್ದೇಕೆ ಎಂದು ಬಿಜೆಪಿ ಹೈಕಮಾಂಡ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.