ADVERTISEMENT

ಅಕ್ರಮ ಮಾಡಿದವರು ಬಿಜೆಪಿ ಸೇರಿದರೆ ಸಾಚಾಗಳಾಗುತ್ತಾರೆ: ದಿನೇಶ್ ಗುಂಡೂರಾವ್

‘ಅಕ್ರಮ ಕುಳಗಳಿಗೆ ಬಿಜೆಪಿ ಕ್ಷಮಾದಾನ ಯೊಜನೆ’: ಕೆಪಿಸಿಸಿ ಅಧ್ಯಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 10:45 IST
Last Updated 5 ಸೆಪ್ಟೆಂಬರ್ 2019, 10:45 IST
ದಿನೇಶ್ ಗುಂಡೂರಾವ್ (ಸಂಗ್ರಹ ಚಿತ್ರ)
ದಿನೇಶ್ ಗುಂಡೂರಾವ್ (ಸಂಗ್ರಹ ಚಿತ್ರ)   

ತುಮಕೂರು:ಅಕ್ರಮ ಕುಳಗಳ ರಕ್ಷಣೆಗೆ ಬಿಜೆಪಿ ಕ್ಷಮಾದಾನ ಯೋಜನೆ ಜಾರಿ ಮಾಡಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮ ಮಾಡಿರುವವರು ಬಿಜೆಪಿ ಸೇರಿದರೆ ಸಾಚಾಗಳಾಗುತ್ತಾರೆ. ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗುವುದಿಲ್ಲ. ಅಕ್ರಮ ಕುಳಗಳಿಗೆ ಕ್ಷಮಾದಾನ ಯೋಜನೆಯಡಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಡಿ.ಕೆ.ಶಿವಕುಮಾರ್ ಅವರಿಗೂ ಬಿಜೆಪಿ ಸೇರಲು ಸಾಕಷ್ಟು ಒತ್ತಡ ಹಾಕಲಾಗಿದೆ. ಆದರೆ, ಅವರು ‘ನಾನು ಕಾಂಗ್ರೆಸ್ ನಿಷ್ಠ. ನೀವೇನಾದರೂ ಮಾಡಿಕೊಳ್ಳಿ’ ಎಂದು ಹೇಳಿದ ಬಳಿಕ ಐ.ಟಿ, ಇ.ಡಿ. ದಾಳಿ ಮಾಡಿಸಿ ಸೇಡಿನ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಶಿವಕುಮಾರ್ ಅವರು ಕಾನೂನು ಹೋರಾಟ ಮಾಡುತ್ತಿದ್ದು, ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಗುಂಡೂರಾವ್ ಹೇಳಿದರು.

ADVERTISEMENT

ತಾವು ನಡೆಸುತ್ತಿರುವ ದಾಳಿ, ತನಿಖೆ ರಾಜಕೀಯ ಪ್ರೇರಿತವಾದುದು. ಅಧಿಕಾರದಲ್ಲಿರುವ ಪಕ್ಷದವರೊಂದಿಗೆ ಮಾತುಕತೆ ಮಾಡಿ ಸರಿ ಮಾಡಿಕೊಂಡು ಬಿಡಿ. ನಾವು ವಾಪಸ್ ಹೋಗುತ್ತೇವೆ ಎಂದುಆದಾಯ ತೆರಿಗೆ, ಇ.ಡಿ. ಅಧಿಕಾರಿಗಳೇ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದಾರೆ. ಯಾವುದಕ್ಕೂ ಶಿವಕುಮಾರ್ ಬಗ್ಗದೇ ಇದ್ದಾಗ ಬಂಧನದಂತಹ ಕ್ರಮವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಆರೋಪ ಮಾಡಿದರು.

‘ಮಧ್ಯಂತರ ಚುನಾವಣೆಗೆ ಸಿದ್ಧತೆ’

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಆಡಳಿತದ ಮೇಲೆ ಬಿಜೆಪಿ ಕೇಂದ್ರ ನಾಯಕರಿಗೆ ಅತೃಪ್ತಿ ಇದೆ. ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ.ಯಡಿಯೂರಪ್ಪ ನೇತೃತ್ವದ ಸರ್ಕಾರ ಬೀಳಿಸಿ ಗುಜರಾತ್,ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಸಲು ಆಂತರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ, ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಗುಂಡೂರಾವ್ ಹೇಳಿದರು.

ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನೂ ತಳಮಟ್ಟದಿಂದ ಸಂಘಟನೆ ಮಾಡಲಾಗುತ್ತಿದೆ. ವಾರ್ಡ್, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಸಂಘಟನೆಗೆ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಮನೆ ಮನೆಗೆ ಸರ್ಕಾರದಿಂದಲೇ ಮದ್ಯ ಪೂರೈಕೆ ಯೋಜನೆ ರೂಪಿಸುವ ಬಗ್ಗೆ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ಇದರಿಂದಲೇ ಈ ಬಿಜೆಪಿ ಸರ್ಕಾರದ ಆದ್ಯತೆಗಳೇನು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

‘ನೆರೆ ಪ್ರದೇಶ ವೀಕ್ಷಣೆಗೆ ಮೋದಿ ಬರುತ್ತಿಲ್ಲ’

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡಲು ಬರುತ್ತಿಲ್ಲ. ಇಸ್ರೊದಲ್ಲಿ ಚಂದ್ರಯಾನ-2 ಯೋಜನೆ ವೀಕ್ಷಣೆಗೆ ಬರಲಿದ್ದಾರೆ. ಬಿಜೆಪಿಯವರು ನೆರೆ ಪ್ರದೇಶ ಭೇಟಿಗೆ ಬರುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಗುಂಡೂರಾವ್ ದೂರಿದರು.

ನೆರೆ ಪ್ರದೇಶದಲ್ಲಿ ಪರಿಹಾರ ಕಾರ್ಯಕ್ಕೆ, ಸಂತ್ರಸ್ತರಿಗೆ ಪರಿಹಾರ, ವಸತಿ ನಿರ್ಮಾಣ ಸೇರಿದಂತೆ ವಿವಿಧ ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಕೋರಿ ಪ್ರಧಾನಿ ಮೋದಿ ಅವರಿಗೆ ಆ ದಿನ ಕಾಂಗ್ರೆಸ್ ಪಕ್ಷದಿಂದ ಮನವಿ ಸಲ್ಲಿಸಲಾಗುವುದು. ಚರ್ಚೆಗೂ ಸಮಯ ಕೋರಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.