ADVERTISEMENT

ಆನೆಗಳ ಭ್ರೂಣಹತ್ಯೆ ಮಾಡಿ: ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 2:47 IST
Last Updated 23 ಸೆಪ್ಟೆಂಬರ್ 2022, 2:47 IST
ಎಂ.ಪಿ. ಕುಮಾರಸ್ವಾಮಿ
ಎಂ.ಪಿ. ಕುಮಾರಸ್ವಾಮಿ    

ಬೆಂಗಳೂರು: ಆನೆಗಳ ಭ್ರೂಣಹತ್ಯೆ ಮಾಡುವ ಮೂಲಕ ಅವುಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.

ಆನೆ ಹಾವಳಿ ಕುರಿತು ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೆ ಕೇಳಿದ ಅವರು, ‘ನಾವು ಪರಿಹಾರ ಕೊಡ್ತೀವಿ, ನೀವು ಸಾಯಲು ಸಿದ್ಧರಾಗಿರಿ ಎಂಬಂತಿದೆ ಸರ್ಕಾರದ ನಿಲುವು. ಆನೆಗಳಿಂದ ಅತ್ತ ಜನರಿಗೂ ನೆಮ್ಮದಿ ಇಲ್ಲ, ನಮಗೂ (ಶಾಸಕರಿಗೆ) ನೆಮ್ಮದಿ ಇಲ್ಲ. ಆನೆಗಳ ಸಂಖ್ಯೆ ನಿಯಂತ್ರಿಸಲು ಭ್ರೂಣಹತ್ಯೆ ಜಾರಿಗೆ ತನ್ನಿ. ಉಪಟಳ ನೀಡುವ ಆನೆಗಳನ್ನು ನಮ್ಮ ಭಾಗದಿಂದ ಹಿಡಿದು ಸಾಗಿಸಿ’ ಎಂದರು.

ಮುಖ್ಯಮಂತ್ರಿಯವರ ಪರವಾಗಿ ಉತ್ತರ ನೀಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ‘ಆನೆಗಳ ಭ್ರೂಣಹತ್ಯೆ ಮಾಡುವ ಪ್ರಸ್ತಾವ ಇಲ್ಲ. ಆನೆಗಳ ಹಾವಳಿಯಿಂದ ಸಂಭವಿಸುವ ಮಾನವ ಜೀವಹಾನಿ ಮತ್ತು ಬೆಳೆ ಹಾನಿಗೆ ನೀಡುವ ಪರಿಹಾರವನ್ನು ದ್ವಿಗುಣಗೊಳಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಮೂಡಿಗೆರೆ ಭಾಗದಲ್ಲಿ ಹಾವಳಿ ನೀಡುತ್ತಿರುವ ‘ಮೂಡಿಗೆರೆ ಬೈರ’ ಎಂಬ ಆನೆಯನ್ನು ಸ್ಥಳಾಂತರಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಬೇರೆ ಕಡೆ ಪುಂಡಾಟ ನಡೆಸುವ ಆನೆಗಳನ್ನು ಹಿಡಿದು ತಂದು ಚಾಮರಾಜನಗರ ಜಿಲ್ಲೆಯಲ್ಲಿ ಬಿಡುತ್ತಾರೆ. ಅವು ನಮ್ಮ ಊರಿನೊಳಕ್ಕೇ ಇರುತ್ತವೆ. ಇನ್ನು ಮುಂದೆ ಹಾಗಾಗದಂತೆ ಕ್ರಮ ವಹಿಸಿ’ ಎಂದು ಕಾಂಗ್ರೆಸ್‌ನ ನರೇಂದ್ರ ಮತ್ತು ಎಚ್‌.ಪಿ. ಮಂಜುನಾಥ್‌ ಆಗ್ರಹಿಸಿದರು.

‘ಎಂಜಿನಿಯರಿಂಗ್‌ ಕಾಲೇಜು ಆರಂಭದ ಪ್ರಸ್ತಾವವಿಲ್ಲ’
ಬೆಂಗಳೂರು:
ರಾಜ್ಯದಲ್ಲಿ ಹೊಸದಾಗಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವ ಪ್ರಸ್ತಾವ ಸರ್ಕಾರದ ಮುಂದ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ನ ಲಿಂಗೇಶ್‌ ಕೆ.ಎಸ್‌. ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, ‘ಈಗ ರಾಜ್ಯದಲ್ಲಿ 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಅಲ್ಲಿ 3,670 ಸೀಟುಗಳಿದ್ದು, 2,086 ಮಾತ್ರ ಭರ್ತಿಯಾಗಿವೆ. 1,584 ಸೀಟುಗಳು ಭರ್ತಿಯಾಗದೆ ಉಳಿದಿವೆ. ಈ ಕಾರಣದಿಂದ ಹೊಸ ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವುದಿಲ್ಲ’ ಎಂದರು.

‘ಡಯಾಲಿಸಿಸ್‌ ಸಮಸ್ಯೆಗೆ ಬಿ.ಆರ್‌. ಶೆಟ್ಟಿ ಕಂಪನಿ ಕಾರಣ’
‘ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆಯಲ್ಲಿ ವ್ಯತ್ಯಯ ಆಗಿರುವುದಕ್ಕೆ ಉದ್ಯಮಿ ಬಿ.ಆರ್‌. ಶೆಟ್ಟಿ ಒಡೆತನದ ಕಂಪನಿ ದಿವಾಳಿ ಆಗಿರುವುದು ಕಾರಣ. ಎರಡು ತಿಂಗಳೊಳಗೆ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಕಾಂಗ್ರೆಸ್‌ನ ಶ್ರೀನಿವಾಸ್‌ ಮಾನೆ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್‌ ಘಟಕಗಳ ನಿರ್ವಹಣೆಯನ್ನು ಎರಡು ಕಂಪನಿಗಳಿಗೆ ಗುತ್ತಿಗೆಗೆ ನೀಡಲಾಗಿತ್ತು. ಬಿ.ಆರ್‌. ಶೆಟ್ಟಿ ಒಡೆತನದ ಕಂಪನಿಗೆ ಗುತ್ತಿಗೆಗೆ ನೀಡಿದ್ದ ಘಟಕಗಳಲ್ಲಿ ಸಮಸ್ಯೆಯಾಗಿದೆ. ಈ ಘಟಕಗಳ ನಿರ್ವಹಣೆಯನ್ನೂ ಎಸ್ಕಾಗ್‌ ಎಂಬ ಮತ್ತೊಂದು ಕಂಪನಿಗೆ ತಾತ್ಕಾಲಿಕವಾಗಿ ನೀಡಲಾಗಿದೆ’ ಎಂದರು.

ಹೊಸ ಗುತ್ತಿಗೆದಾರರ ನೇಮಕಕ್ಕೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.