ADVERTISEMENT

ಸರ್ಕಾರ ರಚನೆಯ ಮೂಡ್‌ನಲ್ಲಿ ಬಿಜೆಪಿ | ಶಾಸಕರ ರಕ್ಷಿಸಿಕೊಳ್ಳಲು ರೆಸಾರ್ಟ್ ಬುಕ್

ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್‌ ಬುಕ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 20:00 IST
Last Updated 7 ಜುಲೈ 2019, 20:00 IST
   

ಬೆಂಗಳೂರು: ‘ದೋಸ್ತಿ’ ಪಕ್ಷಗಳ ಶಾಸಕರ ರಾಜೀನಾಮೆಯಿಂದ ‘ಮೈತ್ರಿ’ ಸರ್ಕಾರ ಪತನ ಖಚಿತ ಎಂದು ವಿಶ್ವಾಸ ಹೊಂದಿರುವ ಬಿಜೆಪಿ ಈಗ ತೆರೆಮರೆಯಲ್ಲೇ ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತುಮಕೂರಿನ ಸಿದ್ದಗಂಗಾ ಮಠ ಮತ್ತು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಮೊರೆ ಹೋದರು. ಸಂಜೆ ಬೆಂಗಳೂರಿಗೆ ಮರಳಿದ ಅವರು ಪಕ್ಷದ ಆಪ್ತ ಶಾಸಕರ ಜತೆ ಸಮಾಲೋಚನೆ ನಡೆಸಿದರು.

ತುಮಕೂರು ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ದೇವರ ಕೃಪೆ ಇದ್ದರೆ ಸಿಹಿ ಸುದ್ದಿ ಕೊಡುವೆ. ರಾಜ್ಯದ ಮೈತ್ರಿ ಸರ್ಕಾರದ ಕ್ಷಣ ಕ್ಷಣದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಮೈತ್ರಿ ಸರ್ಕಾರ ಜನರ, ಶಾಸಕರ ವಿಶ್ವಾಸ ಕಳೆದುಕೊಂಡಿದೆ. ನಾವೇನೂ ಸನ್ಯಾಸಿಗಳಲ್ಲ. ಬಿಜೆಪಿಯ 105 ಶಾಸಕರು ಒಗ್ಗಟ್ಟಾಗಿದ್ದಾರೆ. ಮುಂದೆ ಏನು ಆಗುತ್ತದೆಯೋ ನೋಡೋಣ’ ಎಂದು ಹೇಳಿದರು.

ADVERTISEMENT

ಆದರೆ, ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷದ ಹಿರಿಯ ರಾಷ್ಟ್ರೀಯ ನಾಯಕರ ಹಸಿರು ನಿಶಾನೆ ಸಿಕ್ಕ ಬಳಿಕ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಸ್ವಯಂ ಪ್ರೇರಣೆಯಿಂದ ವಿಶ್ವಾಸ ಮತ ಕೇಳದೇ ಇದ್ದರೆ, ಬಿಜೆಪಿ ರಾಜ್ಯಪಾಲರ ಮೂಲಕ ವಿಶ್ವಾಸ ಮತಕ್ಕೆ ಒತ್ತಡ ಹೇರಲಿದೆ.

ನಿರೀಕ್ಷಿಸಿದಂತೆ ಸೋಮವಾರ ಇನ್ನಷ್ಟು ಶಾಸಕರು ರಾಜೀನಾಮೆ ನೀಡಿದರೆ, ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಒಂದೋ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲವೇ ವಿಶ್ವಾಸಮತ ಎದುರಿಸಬೇಕು. ಬಹುಮತ ಕಳೆದುಕೊಂಡರೆ ವಿಶ್ವಾಸ ಮತದ ಹೆಸರಿನಲ್ಲಿ ವಿಧಾನಸಭೆಯಲ್ಲಿ ಭಾಷಣ ಮಾಡಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಬಿಎಸ್‌ವೈ ಟೆಂಪಲ್‌ ರನ್‌
ತುಮಕೂರು/ಚನ್ನರಾಯಪಟ್ಟಣ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ರಾಜೀನಾಮೆಯಿಂದ ತತ್ತರಿಸಿ ಹೋಗಿದ್ದರೆ, ಇತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಹೇಮಾವತಿ ನಾಲೆ ವೀಕ್ಷಣೆ ಪ್ರವಾಸದ ಹಿನ್ನೆಲೆಯಲ್ಲಿ ಬೆಳಿಗ್ಗೆ ತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜೈ’ ಎಂದು ಘೋಷಣೆ ಕೂಗಿದರು. ಆಗ ಯಡಿಯೂರಪ್ಪ ಮುಖದಲ್ಲಿ ಮಂದಹಾಸ ಮೂಡಿತು.

ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನಂತರ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು–ನವಿಲೆ ಸುರಂಗ ಮಾರ್ಗ ವೀಕ್ಷಿಸಿದರು. ನವಿಲೆಯ ನಾಗೇಶ್ವರ ದೇಗುಲದ ದರ್ಶನ ಪಡೆದರು. ನಂತರ ತಮ್ಮ ಮನೆ ದೇವರು ಎಡೆಯೂರಿನ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಾಗೂರು-ನವಿಲೆ ಸುರಂಗ ಮಾರ್ಗ ವೀಕ್ಷಣೆ ಬಳಿಕ ಮಾತನಾಡಿದ ಅವರು ‘ರಾಜ್ಯಪಾಲರನ್ನೂ ಭೇಟಿಯಾಗುವುದಿಲ್ಲ. ದೆಹಲಿಗೂ ಹೋಗುವುದಿಲ್ಲ. ಈ ತಿಂಗಳ 12ಕ್ಕೆ ವಿಧಾನ ಮಂಡಲದ ಅಧಿವೇಶನ ಇದೆ. ಅಷ್ಟರಲ್ಲಿ ಏನೆಲ್ಲಾ ರಾಜಕೀಯ ಬೆಳವಣಿಗೆಯಾಗುತ್ತದೆ ಎಂಬುದನ್ನು ಕಾದು ನೋಡಲಾಗುವುದು. ಮಧ್ಯಂತರ ಚುನಾವಣೆ ಅಗತ್ಯವಿಲ್ಲ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಮೈತ್ರಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯಲಿ. 105 ಶಾಸಕರನ್ನು ಹೊಂದಿರುವ ಬಿಜೆಪಿ, ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.