ADVERTISEMENT

ಬಿಜೆಪಿ ಶಾಸಕ ಯತ್ನಾಳ ವಿರುದ್ಧ ಸಂಸದ ಸಂಗಣ್ಣ ಕರಡಿ ಗರಂ

ಪಕ್ಷ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಸಂಸದ ಸಂಗಣ್ಣ ಕರಡಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 12:30 IST
Last Updated 2 ಸೆಪ್ಟೆಂಬರ್ 2023, 12:30 IST
<div class="paragraphs"><p>ಸಂಗಣ್ಣ ಕರಡಿ, ಯತ್ನಾಳ್</p></div>

ಸಂಗಣ್ಣ ಕರಡಿ, ಯತ್ನಾಳ್

   

ಕೊಪ್ಪಳ: ಲೋಕಸಭಾ ಚುನಾವಣೆಗೆ ಸಾಕಷ್ಟು ಸಮಯವಿದ್ದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಂಟು ಜನ ಸಂಸದರಿಗೆ ಟಿಕೆಟ್‌ ಇಲ್ಲವೆಂದು ಹೇಳುತ್ತಿದ್ದಾರೆ. ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ; ಪಕ್ಷ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಆಗ್ರಹಿಸಿದರು.

‘ಯತ್ನಾಳ ಅಥವಾ ಇನ್ಯಾರಾದರೂ ಆಗಲಿ ಪಕ್ಷದ ವಿರುದ್ಧ ಮಾತನಾಡಬಾರದು. ಲೋಕಸಭಾ ಚುನಾವಣೆಯ ಟಿಕೆಟ್‌ ವಿಷಯವಾಗಿ ಯಾವುದೇ ಚರ್ಚೆ ನಡೆದಿಲ್ಲ. ಆದರೂ ಊಹಾಪೋಹ ಹರಿದಾಡುತ್ತಿದೆ. ಪಕ್ಷ ವಿರೋಧಿಯಾಗಿ ಮಾತನಾಡುವವರ ಬಗ್ಗೆ ಹೈಕಮಾಂಡ್‌ ನಿಗಾ ವಹಿಸಬೇಕು’ ಎಂದು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಭೆಗೆ ಪಕ್ಷದ ಪ್ರಮುಖ ನಾಯಕರು ಗೈರಾದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಅಂದು ಬೇರೆ ಕೆಲಸದ ನಿಮಿತ್ತ ನಮ್ಮ ಎಲ್ಲ ನಾಯಕರು ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಹಾಗಂದ ಮಾತ್ರಕ್ಕೆ ಅವರನ್ನು ದೂರವಿಟ್ಟಿದ್ದಾರೆ ಎಂದಲ್ಲ. ಎಲ್ಲರ ಅಭಿಪ್ರಾಯವನ್ನೇ ಪಡೆದುಕೊಂಡೇ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದಷ್ಟು ಬೇಗನೆ ಹೊಸ ರಾಜ್ಯಾಧ್ಯಕ್ಷರ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ’ ಎಂದು ತಿಳಿಸಿದರು.

‘ಮಾಜಿ ಶಾಸಕ ರೇಣುಕಾಚಾರ್ಯ ಪಕ್ಷದ ವಿರುದ್ಧವಾಗಿ ಯಾವ ಕಾರಣಕ್ಕಾಗಿ ಮಾತನಾಡುತ್ತಿದ್ದಾರೆ ಎನ್ನುವುದು ನನಗಂತೂ ತಿಳಿದಿಲ್ಲ. ಈ ವಿಷಯವನ್ನು ನೀವು ಅವರಿಗೆ ಕೇಳಬೇಕು. ಏನೇ ಸಮಸ್ಯೆಯಿದ್ದರೂ ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು’ ಎಂದರು.

‘ದೇಶದಾದ್ಯಂತ ಇಂಡಿಯಾ ಹೆಸರಿನಲ್ಲಿ ಸಂಘಟನೆ ನಡೆಯುತ್ತಿದೆ. ಅವರಲ್ಲಿ ಹೊಂದಾಣಿಕೆ ಇಲ್ಲ. ಯಾರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆಂಬ ಗೊಂದಲವಿದೆ. ರಾವಣನಿಗೆ ಹತ್ತು ತಲೆ ಇದ್ದಂತೆ, ಯಾರು ಪ್ರಮುಖರು ಎಂಬ ಗೊಂದಲ ಶುರುವಾಗಿದೆ. ಹೊಂದಾಣಿಕೆ ಇಲ್ಲದೆ ಅದೊಂದು ಕಿಚಡಿ ಪಾರ್ಟಿಯಾಗಿದೆ’ ಎಂದು ಸಂಗಣ್ಣ ಕರಡಿ ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಹಳಿ ತಪ್ಪಿದೆ. ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದರೆ ಆ ಪಕ್ಷದ ಆಡಳಿತ ವೈಖರಿ ಹೇಗಿದೆ ಎಂಬುದು ಗೊತ್ತಾಗುತ್ತದೆ. ರಾಯರಡ್ಡಿಗೆ ಕಾಂಗ್ರೆಸ್‌ನಲ್ಲಿ ಗೌರವವೇ ಇಲ್ಲದಂತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.