ADVERTISEMENT

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ ₹25 ಕೋಟಿ ಆಮಿಷ: ರಾಜಸ್ಥಾನ ಸಿಎಂ ಗೆಹ್ಲೋಟ್‌

ಪಿಟಿಐ
Published 11 ಜೂನ್ 2020, 3:23 IST
Last Updated 11 ಜೂನ್ 2020, 3:23 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌    

ಜೈಪುರ: ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಶಾಸಕರಿಗೆ ₹25 ಕೋಟಿ ಆಮಿಷವೊಡ್ಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನೆಲ್ಲ ಶಾಸಕರನ್ನು ಜೈಪುರದ ರೆಸಾರ್ಟ್‌ವೊಂದಕ್ಕೆ ಕರೆಸಿಕೊಂಡು ಸಭೆ ನಡೆಸಿತು. ನಂತರ ಮಾತನಾಡಿರುವ ಮುಖ್ಯಮಂತ್ರಿ ಗೆಹ್ಲೋಟ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮಧ್ಯಪ್ರದೇಶದಲ್ಲಿ ಮಾಡಿದ ರೀತಿಯಲ್ಲೇ ರಾಜಸ್ಥಾನದಲ್ಲೂ ಮಾಡಲು ಬಿಜೆಪಿ ಹೊರಟಿದೆ ಎಂದು ಗೊತ್ತಾಗಿದೆ. ಕಾಂಗ್ರೆಸ್‌ ಶಾಸಕರಿಗೆ ₹25 ಕೋಟಿಗಳ ಆಮಿಷವೊಡ್ಡಲಾಗುತ್ತಿದೆ. ₹10 ಕೋಟಿಯನ್ನು ಮುಂಗಡವಾಗಿ ನೀಡುವುದಾಗಿ ನಂಬಿಸುತ್ತಿದೆ. ಜೈಪುರಕ್ಕೆ ದೊಡ್ಡ ಮಟ್ಟದ ಹಣ ರವಾನೆಯಾಗಿದೆ,’ ಎಂದು ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ADVERTISEMENT

‘ಆದರೆ, ಬಿಜೆಪಿಯ ಈ ಪ್ರಯತ್ನಗಳು ಫಲಿಸುವುದಿಲ್ಲ. ಕಾಂಗ್ರೆಸ್‌ ಶಾಸಕರು ಒಟ್ಟಾಗಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ನಾಯಕರ ಪಾಡು ಈಗ ಅತಂತ್ರವಾಗಿದೆ,’ಎಂದೂ ಅವರು ಹೇಳಿದರು.

‘ರಾಜ್ಯಸಭೆಯನ್ನು ಗೆಲ್ಲುವ ಸಲುವಾಗಿ ಬಿಜೆಪಿಯು ಶಾಸಕರನ್ನು ಖರೀದಿಸಲು ಮುಂದಾಗಿತ್ತು. ಆದರೆ, ಶಾಸಕರು ಖರೀದಿಗೆ ಸಿಗದೇಹೋದಾಗ ಅದು ಚುನಾವಣೆಯನ್ನೇ ಮುಂದೂಡಿತ್ತು,’ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗೆಹ್ಲೋಟ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.