ADVERTISEMENT

ಪೊಲೀಸರ ಸ್ಥೈರ್ಯ ಕುಗ್ಗಿಸಿದ ಎಚ್‌ಡಿಕೆ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:35 IST
Last Updated 10 ಜನವರಿ 2020, 19:35 IST
ಸಂಸದೆ ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ    

ಬೆಂಗಳೂರು: ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಂಗಳೂರು ಗಲಭೆಯ ಬಗ್ಗೆ ಕಟ್‌ ಅಂಡ್‌ ಪೇಸ್ಟ್‌ ಮಾಡಿದ ದೃಶ್ಯಾವಳಿಗಳ ಸಿಡಿ ಬಿಡುಗಡೆ ಮಾಡಿ ರಾಜ್ಯ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಕರ್ನಾಟಕ ಪೊಲೀಸರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಿ, ಮೂಲಭೂತವಾದಿಗಳು, ಗಲಭೆಕೋರರು ಮತ್ತು ಕೇರಳದ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹರಿಹಾಯ್ದರು.

‘ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಕುಮಾರಸ್ವಾಮಿ ಪೊಲೀಸರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಈ ಮೂಲಕ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಇವರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ. ಚುನಾವಣೆಗೆ ಇನ್ನೂ ಮೂರು ವರ್ಷಗಳಿವೆ, ಇಷ್ಟು ಆತುರದಲ್ಲಿ ಓಟ್‌ ಬ್ಯಾಂಕ್‌ ರಾಜಕೀಯ ಮಾಡುವ ಅಗತ್ಯವೇನು’ ಎಂದೂ ಪ್ರಶ್ನಿಸಿದರು.

ADVERTISEMENT

ಮಂಗಳೂರಿನಲ್ಲಿ ಶಾಂತಿ ಮರಳುತ್ತಿರುವ ಸಂದರ್ಭದಲ್ಲೇ ಅಶಾಂತಿಗೆ ಕುಮಾರಸ್ವಾಮಿ ಕುಮ್ಮಕ್ಕು ನೀಡಿದ್ದಾರೆ. ಅವರು ಇಂದು ಬಿಡುಗಡೆ ಮಾಡಿರುವ ಸಿಡಿಯ ಸತ್ಯಾಸತ್ಯತೆ ಪರಿಶೀಲನೆಗೆ ಸಿಡಿಯನ್ನು ವಿದಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದೂ ಶೋಭಾ ತಿಳಿಸಿದರು.

ರಾಜಕೀಯ ನೆಲೆ ಕಳೆದುಕೊಂಡಿರುವ ಕುಮಾರಸ್ವಾಮಿ ಒಂದು ಸಮುದಾಯವನ್ನು ಇನ್ನೊಂದು ಸಮುದಾದ ಮೇಲೆ ಎತ್ತಿ ಕಟ್ಟುವ ಕೆಲಸಕ್ಕೆ ಇಳಿದಿದ್ದಾರೆ. ಮಂಗಳೂರಿನ ಬಂದರು ಪೊಲೀಸ್‌ ಠಾಣೆ ಹೇಗಿದೆ ಎಂಬುದನ್ನು ಅವರು ನೋಡಿಯೇ ಇಲ್ಲ. ಆದರೂ ಅಲ್ಲಿ ನಡೆದ ಗೋಲಿಬಾರ್‌ ಕಣ್ಣಾರೆ ಕಂಡವರಂತೆ ಮಾತನಾಡುತ್ತಾರೆ. ಅಂದು ಅಲ್ಲಿ ಗೋಲಿಬಾರ್‌ ಮಾಡದಿದ್ದರೆ ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳನ್ನು ಅಪಹರಿಸುತ್ತಿದ್ದರು ಎಂದರು.

ಇಷ್ಟೆಲ್ಲಾ ಮಾತನಾಡುವ ಕುಮಾರಸ್ವಾಮಿ ಮಂಗಳೂರು ಗಲಭೆಯಲ್ಲಿ ಗಾಯಗೊಂಡಿರುವ 85 ಪೊಲೀಸರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಔದಾರ್ಯವನ್ನೂ ತೋರಿಸಿಲ್ಲ ಎಂದು ಶೋಭಾ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.