
ಬೆಂಗಳೂರು: ಬಿಜೆಪಿಯಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ, ಬಿಹಾರ ಸಚಿವ ನಿತಿನ್ ನಬಿನ್ ಎಂಬುವರನ್ನು ನೇಮಕ ಮಾಡಿರುವುದು, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ ಪಂಕಜ್ ಚೌಧರಿ ಅವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಯ ಚರ್ಚೆ ಆರಂಭವಾಗಿದೆ.
‘ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುತ್ತಾರೋ ಅಥವಾ ಹೊಸಬರನ್ನು ತರುತ್ತಾರೋ? ಹೊಸಬರನ್ನು ಮಾಡಿದರೆ ಯಾರನ್ನು ಮಾಡಬಹುದು’ ಎಂಬ ಲೆಕ್ಕಾಚಾರ ಶುರುವಾಗಿದೆ.
ತಮ್ಮನ್ನೇ ಮುಂದುವರಿಸುವ ಆದೇಶ ಹೊರಡಿಸಬಹುದು ಎಂಬ ವಿಶ್ವಾಸ ವಿಜಯೇಂದ್ರ ಅವರಿಗಿದೆ. ಒಮ್ಮೆ ತಮ್ಮನ್ನು ಅಧಿಕೃತಗೊಳಿಸಿದರೆ, ಇತರ ನಾಯಕರಲ್ಲಿರುವ ಅಸಮಾಧಾನವೂ ತಗ್ಗಿ ತಮಗೆ ಎಲ್ಲರ ಸಹಕಾರ ಸಿಗಬಹುದು ಎಂಬ ಭರವಸೆ ಅವರದು.
ಸದ್ಯವೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ತಕ್ಷಣದಲ್ಲೇ ಅಧ್ಯಕ್ಷರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ. ಈ ಚುನಾವಣೆಯಲ್ಲಿ ಅಧ್ಯಕ್ಷರ ಸಂಘಟನಾ ಚತುರತೆ ಮತ್ತು ಚುನಾವಣೆಯಲ್ಲಿ ಪಕ್ಷಕ್ಕೆ
ಎಷ್ಟರ ಮಟ್ಟಿಗೆ ಗೆಲುವು ತಂದುಕೊಡಬಲ್ಲರು ಎಂಬುದರ ಪರೀಕ್ಷೆಯೂ ಆಗಲಿದೆ. ಇದರಿಂದ ಮುಂದಿನ ತೀರ್ಮಾನಕ್ಕೆ ವರಿಷ್ಠರು ಇದನ್ನು ಮಾನದಂಡವಾಗಿಯೂ ತೆಗೆದುಕೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.