ADVERTISEMENT

ತಿರಂಗಾ ಅಭಿಯಾನದ ಮುನ್ನ ಕ್ಷಮೆ ಯಾಚಿಸಲಿ: ಸಿದ್ದರಾಮಯ್ಯ

ರಾಷ್ಟ್ರಧ್ವಜ ಅಪಶಕುನದ ಸಂಕೇತ ಎಂದಿದ್ದ ಆರ್ಗನೈಸರ್‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 16:21 IST
Last Updated 5 ಆಗಸ್ಟ್ 2022, 16:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ದೇಶದಲ್ಲಿ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂಬ ಅಭಿಯಾನಕ್ಕೆ ಕರೆ ನೀಡುತ್ತಿರುವ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರು, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನಗಳ ಕುರಿತು ಈವರೆಗಿನ ತಮ್ಮ ಅಭಿಪ್ರಾಯಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಬಿಜೆಪಿ ನಡೆಸುತ್ತಿರುವ ‘ಮನೆ ಮನೆಯಲ್ಲಿ ಧ್ವಜ’ ಅಭಿಯಾನಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಅದಕ್ಕೂ ಮೊದಲು ಆರ್‌ಎಸ್‌ಎಸ್‌ನ ಎಲ್ಲ ಶಾಖೆಗಳಲ್ಲೂ ರಾಷ್ಟ್ರ ಧ್ವಜಾರೋಹಣ ಕಡ್ಡಾಯಗೊಳಿಸಲಿ. ಕೇಶವ ಕೃಪಾದಂತಹ ಕಚೇರಿಗಳ ಮೇಲೂ ರಾಷ್ಟ್ರಧ್ವಜ ಹಾರಿಸಲಿ’ ಎಂದು ಒತ್ತಾಯಿಸಿದ್ದಾರೆ.

‘ರಾಷ್ಟ್ರಧ್ವಜ ಅಪಶಕುನದ ಸಂಕೇತ ಎಂಬುದಾಗಿ ಬಿಂಬಿಸಿ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್‌’ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖನವನ್ನು ಹಿಂಪಡೆಯಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನದ ಕುರಿತು ಆರ್‌ಎಸ್‌ಎಸ್‌, ಜನಸಂಘ, ಬಿಜೆಪಿ ಮತ್ತು ಅದರ ಪರಿವಾರದ ಸಂಘಟನೆಗಳು ನೀಡಿರುವ ಅಸರ್ಮಪಕ ಹೇಳಿಕೆಗಳಿಗಾಗಿ ದೇಶದ ಕ್ಷಮೆ ಯಾಚಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಭಾರತದ ಧ್ವಜವನ್ನು ಸುರಯ್ಯಾ ತಯ್ಯಬ್ಜಿ, ಪಿಂಗಳಿ ವೆಂಕಯ್ಯ, ಗಾಂಧೀಜಿ, ನೆಹರೂ, ಸುಭಾಷ್‌ಚಂದ್ರ ಬೋಸ್ ಮುಂತಾದ ಮಹಾನ್ ದೇಶಭಕ್ತರು ಸ್ವಾತಂತ್ರ್ಯ ಹೋರಾಟದ ದೀರ್ಘ ಪ್ರಯತ್ನದ ಮೂಲಕ ಸಿದ್ಧಗೊಳಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ರಾಷ್ಟ್ರಧ್ವಜ ಹಾರಿಸುವ ಅಭಿಯಾನವನ್ನು ನಡೆಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ನೈತಿಕತೆಯೇ ಇರುವುದಿಲ್ಲ ಎಂದಿದ್ದಾರೆ.

ತ್ರಿವರ್ಣ ಧ್ವಜವು ಸ್ವಾತಂತ್ರ್ಯ, ಪ್ರಜಾತಂತ್ರ ಹಾಗೂ ಸತ್ಯಶೀಲತೆಯನ್ನು ಪ್ರತಿನಿಧಿಸುತ್ತದೆ. ಈ ಆಶಯಗಳಿಗೆ ವಿರುದ್ಧವಾದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಈಗ ಪ್ರಚಾರಕ್ಕಾಗಿ ರಾಷ್ಟ್ರಧ್ವಜ ಅಭಿಯಾನ ನಡೆಸಲು ಹೊರಟಿವೆ. ರಾಷ್ಟ್ರಧ್ವಜವನ್ನು ಹತ್ತಿಯಲ್ಲೇ ಸಿದ್ಧಪಡಿಸಿರಬೇಕು ಎಂಬುದು ಧ್ವಜಸಂಹಿತೆ. ಅದಕ್ಕೆ ವಿರುದ್ಧವಾಗಿ ಪಾಲಿಯೆಸ್ಟರ್‌ ಬಟ್ಟೆಯಿಂದ ರೂಪಿಸಿದ, ವಿರೂಪಗೊಳಿಸಿದ ಬಾವುಟಗಳನ್ನು ಹಾರಿಸಬಾರದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.