ADVERTISEMENT

ವರ್ಗಾವಣೆ ಬಿಡ್ಡಿಂಗ್‌ಗೆ ಪವನ್‌ ನೆಜ್ಜೂರ್ ಬಲಿಪಶು:ಕೇಂದ್ರ ಸಚಿವೆ ಶೋಭಾಕರಂದ್ಲಾಜೆ

ಬಳ್ಳಾರಿ ಗುಂಪು ಘರ್ಷಣೆ– ಎಸ್‌ಪಿ ಅಮಾನತು * ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 14:02 IST
Last Updated 4 ಜನವರಿ 2026, 14:02 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ‘ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಬಿಡ್ಡಿಂಗ್‌ ನಡೆಸಲಾಗುತ್ತಿದೆ. ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಬಿಡ್ಡಿಂಗ್‌ಗೆ ಐಪಿಎಸ್‌ ಅಧಿಕಾರಿ ಪವನ್‌ ನೆಜ್ಜೂರ್ ಬಲಿಪಶುವಾಗಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಡ್ಡಿಂಗ್‌ ನಡೆಸಿ, ಹಣ ವಸೂಲಿ ಮಾಡಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. 11 ತಿಂಗಳಲ್ಲೇ ಮತ್ತೆ ವರ್ಗಾವಣೆ ಮಾಡುತ್ತಾರೆ. ಆ ಅವಧಿಯೊಳಗೆ ಅಧಿಕಾರಿಗಳು ಹಣ ಹೊಂದಿಸಿಕೊಳ್ಳಬೇಕು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ’ ಎಂದರು.

‘ಪವನ್‌ ನೆಜ್ಜೂರ್ ಅವರು ಬಳ್ಳಾರಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಗಲಾಟೆ ನಡೆದಿದೆ. ಗುಂಪು ಘರ್ಷಣೆ ಸಂದರ್ಭದಲ್ಲಿ ಅವರು ಸ್ಥಳದಲ್ಲಿ ಇದ್ದರು ಎಂಬುದಕ್ಕೆ ವಿಡಿಯೊ ಸಾಕ್ಷಿ ಇದೆ. ಆದರೆ ಅದನ್ನು ಮುಚ್ಚಿಟ್ಟು, ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ ಎಂದು ಸುಳ್ಳು ಆರೋಪ ಹೊರಿಸಿ ಅಮಾನತು ಮಾಡಲಾಗಿದೆ’ ಎಂದು ಆಪಾದಿಸಿದರು.

ADVERTISEMENT

‘ಇದೇ ಕಾರಣಕ್ಕೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರು ಮರಣ ಪತ್ರ ಸಹ ಬರೆದಿದ್ದು, ಅದರಲ್ಲಿ ಹಿರಿಯ ಅಧಿಕಾರಿಗಳ ಹೆಸರು ಇದೆ ಎಂಬುದು ಗೊತ್ತಾಗಿದೆ. ಆದರೆ ಸರ್ಕಾರ ಆ ಪತ್ರವನ್ನು ಮುಚ್ಚಿಡುತ್ತಿದೆ. ಯಾರನ್ನು ರಕ್ಷಿಸಲು ಸರ್ಕಾರ ಹೀಗೆ ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ಗುಂಪು ಘರ್ಷಣೆಗೆ ಕಾರಣರಾದ ಭರತ್‌ ರೆಡ್ಡಿ ಜತೆಗೆ ಕೂತು ಮುಖ್ಯಮಂತ್ರಿ ಫೋಟೊ ತೆಗೆಸಿಕೊಂಡಿದ್ದಾರೆ. ಇವರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ?
ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.