ADVERTISEMENT

ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ

ಮಾಜಿ ಮುಖ್ಯಮಂತ್ರಿಗಳಿಬ್ಬರ ವಿರುದ್ಧ ಗಣೇಶ್ ಕಾರ್ಣಿಕ್ ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:04 IST
Last Updated 18 ಫೆಬ್ರುವರಿ 2021, 8:04 IST

ಮಂಗಳೂರು: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಪ್ರಾಮಾಣಿಕವಾಗಿ ನಡೆಯುತ್ತಿರುವಾಗ, ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಕೆಲವು ಅತೃಪ್ತ ಆತ್ಮಗಳು ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯದ ಪರಿಸ್ಥಿತಿಯಲ್ಲಿ ಮೂಲೆಗುಂಪಾಗಿ, ಕೆಲವೇ ಜಿಲ್ಲೆಗಳಲ್ಲಿ ಪ್ರಸ್ತುತವಾಗಿರುವ ಪಕ್ಷದ ಉಳಿವಿಗೆ, ಒಂದು ವರ್ಗವನ್ನು ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಅವರ ಹೇಳಿಕೆ ಟೀಕೆಗೂ ಅರ್ಹವಲ್ಲ. ಬೇಜವಾಬ್ದಾರಿ ಹೇಳಿಕೆ ನೀಡಿ, ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ, ಕಣ್ಣೀರು ಸುರಿಸಿ ಪಲಾಯನ ಮಾಡುವುದು ಅವರ ಸ್ವಭಾವ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇವರಿಂದ ಪ್ರಾಮಾಣಿಕತೆಯ ಪಾಠ ಕಲಿಯಬೇಕಾಗಿಲ್ಲ’ ಎಂದು ಎದಿರೇಟು ನೀಡಿದರು.

‘ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದ್ವೇಷಪೂರಿತ ಹೇಳಿಕೆಗಳು ಸಮಾಜದಲ್ಲಿ ವಿಷಬೀಜ ಬಿತ್ತಿ, ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವ ವಿಕೃತಿ. ಸಮಾಜದ ಕೆಲವು ವರ್ಗಗಳ ಬಗ್ಗೆ ಅವರಿಗಿರುವ ದ್ವೇಷ, ಅಸಹನೆ, ತಮಗೆ ಅನುಕೂಲವಾದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೂ ಧಿಕ್ಕರಿಸುವುದು ಸಿದ್ದರಾಮಯ್ಯ ಅವರ ವ್ಯಕ್ತಿತ್ವವಾಗಿದೆ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ಹೇಳಿಕೆಯು, ಕಾನೂನು ಪದವೀಧರರಾಗಿರುವ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸಿರಲಿಲ್ಲ’ ಎಂದು ಖಾರವಾಗಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.