ADVERTISEMENT

ಒಳಮೀಸಲಾತಿ | ಅಲೆಮಾರಿಗಳಿಗೆ ನ್ಯಾಯಕ್ಕಾಗಿ ಹೋರಾಟ: ಬಿಜೆಪಿ ಹಿರಿಯರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 19:21 IST
Last Updated 13 ಜನವರಿ 2026, 19:21 IST
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಬಿಜೆಪಿ ಹಿರಿಯ ನಾಯಕರ ಸಭೆ ತೀರ್ಮಾನಿಸಿದೆ. ಇದರ ಉಸ್ತುವಾರಿಯನ್ನು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲು ನಿರ್ಧರಿಸಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಛಲವಾದಿ ನಾರಾಯಣಸ್ವಾಮಿ, ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ ಹಾಜರಿದ್ದರು.

 ‘ನಮ್ಮ ಸರ್ಕಾರ ಅಲೆಮಾರಿಗಳಿಗೂ ಶೇ 1ರಷ್ಟು ಒಳಮೀಸಲಾತಿ ನೀಡಿತ್ತು. ಅತ್ಯಂತ ವೈಜ್ಞಾನಿಕವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದ್ದೆವು. ಪರಿಶಿಷ್ಟ ಜಾತಿಯ ಯಾವುದೇ ಸಮುದಾಯಕ್ಕೂ ಅನ್ಯಾಯ ಮಾಡಿರಲಿಲ್ಲ. ಸಿದ್ದರಾಮಯ್ಯ ಸರ್ಕಾರ ನೀಡಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲೇ ಹಂಚಿಕೆ ಮಾಡಿದ್ದೆವು. ಆದರೆ, ಕಾಂಗ್ರೆಸ್‌ ಸರ್ಕಾರ ಅಲೆಮಾರಿಗಳಿಗೆ ಏನೂ ಕೊಟ್ಟಿಲ್ಲ’ ಎಂದು ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಈಗ ಸಿದ್ದರಾಮಯ್ಯ ಸರ್ಕಾರ ನಿಗದಿ ಮಾಡಿರುವ ಒಳಮೀಸಲಾತಿ ಪ್ರಮಾಣದ ಬಗ್ಗೆ ಪರಿಶಿಷ್ಟ ಜಾತಿಗಳಲ್ಲಿ ಯಾರಿಗೂ ಸಮಾಧಾನವಿಲ್ಲ. ವಿಶೇಷವಾಗಿ ಅಲೆಮಾರಿ ಸಮುದಾಯ ಆಕ್ರೋಶಗೊಂಡಿದೆ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದವರಿಗೆ ನಾವು ಧ್ವನಿಯಾಗಬೇಕು. ಹೋರಾಟ ನಡೆಸುವಂತೆ ಪಕ್ಷದ ವರಿಷ್ಠರಿಂದಲೂ ಸೂಚನೆ ಇದೆ. ಆದ್ದರಿಂದ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಾಯಕರ ಜತೆ ಸಭೆ ಮಾಡಿ ಹೋರಾಟದ ರೂಪುರೇಷೆ ತೀರ್ಮಾನಿಸಲಾಗುವುದು’ ಎಂದು ಬೊಮ್ಮಾಯಿ ಅವರು ಸಭೆಗೆ ವಿವರಿಸಿದರು.

‘ಪಕ್ಷದಲ್ಲಿರುವ ಪರಿಶಿಷ್ಟ ಸಮುದಾಯದ ನಾಯಕರ ಮೂಲಕ ಹೋರಾಟವನ್ನು ಸಂಘಟಿಸಲಾಗುವುದು. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಂಘಟನೆಗಳನ್ನೂ ಜತೆಗೆ ಸೇರಿಸಿಕೊಳ್ಳಬೇಕು’ ಎಂದು ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಮೂಲಗಳು ಹೇಳಿವೆ.

‘ವಿವಿಧ ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಿರುವ ಸರಣಿ ಹೋರಾಟಗಳಲ್ಲಿ ಎಲ್ಲ ನಾಯಕರೂ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಆಡಳಿತ ಯಂತ್ರವೇ ಕುಸಿದು ಹೋಗಿದ್ದು, ಕಾನೂನು ಸುವ್ಯವಸ್ಥೆ ನೆಲಕಚ್ಚಿದೆ. ಜನ ಭಯಭೀತರಾಗಿರುವ ಈ ಸಂದರ್ಭದಲ್ಲಿ ಪಕ್ಷದ ನಾಯಕರು ಜನರ ನೆರವಿಗೆ ಧಾವಿಸಬೇಕು’ ಎಂದು ಯಡಿಯೂರಪ್ಪ ಸೂಚನೆ ನೀಡಿದರೆಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.