ADVERTISEMENT

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮೂಲಕ ವಿಜಯ ಪತಾಕೆ: ಜೆ.ಪಿ.ನಡ್ಡಾ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 12:19 IST
Last Updated 1 ಮಾರ್ಚ್ 2023, 12:19 IST
   

ಮಹದೇಶ್ವರ ಬೆಟ್ಟ (ಚಾಮರಾಜನಗರ): ವಿಜಯ ಸಂಕಲ್ಪ ಯಾತ್ರೆಯ ಮೂಲಕ ಜನರ ಆಶೀರ್ವಾದ ಪಡೆದು ಕರ್ನಾಟಕದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬುಧವಾರ ಹೇಳಿದರು.

ಗಡಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, 'ಮಲೆ‌ಮಹದೇಶ್ವರ ಸ್ವಾಮಿಯ ಆಶೀರ್ವಾದ ಪಡೆದು ಯಾತ್ರೆ ಆರಂಭಿಸಿದ್ದೇವೆ. ರಾಜ್ಯದಲ್ಲಿ ಬಿಜೆಪಿಗೆ ಜನರ ಆಶೀರ್ವಾದ ಖಂಡಿತವಾಗಿಯೂ ಸಿಗಲಿದೆ' ಎಂದರು.

'ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ. ನಾನು ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದೇನೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಬೆಳಗಾವಿಯಲ್ಲಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇನ್ನೆರಡು ಕಡೆಗಳಲ್ಲಿ ಯಾತ್ರೆ ಉದ್ಘಾಟಿಸಲಿದ್ದಾರೆ' ಎಂದರು.

ADVERTISEMENT

'ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಯಾತ್ರೆ ಸಂಚರಿಸಲಿದೆ. 20 ದಿನಗಳಲ್ಲಿ 8000 ಕಿ.ಮೀ ಕ್ರಮಿಸಲಿದೆ. 75 ಸಮಾವೇಶ, 150ಕ್ಕೂ ಹೆಚ್ಚು ರೋಡ್ ಶೋಗಳು ನಡಯಲಿವೆ' ಎಂದರು.

ಬುಡಕಟ್ಟು ಜನರ ಅಭಿವೃದ್ಧಿಗೆ ಬದ್ಧ: ಮಹದೇಶ್ವರ ಬೆಟ್ಟದ ಬೇಡಗಂಪಣ ಹಾಗೂ ಸೋಲಿಗ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ಇಲ್ಲಿಗೆ ಕೇವಲ ಸಂವಾದ ನಡೆಸಲು ಬಂದಿಲ್ಲ. ಈ ಪ್ರದೇಶದ ಚಿತ್ರಣ ಬದಲು ಮಾಡಲು ಬಂದಿದ್ದೇನೆ. ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಲು ಪ್ರಧಾನಿ ಕಾರಣ. ಆದಿವಾಸಿಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಶ್ರಮಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಲಾಗುವುದು' ಎಂದರು.

ಬಿಜೆಪಿ ದಿಗ್ವಿಜಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, 'ಮಹದೇಶ್ವರ ಸ್ವಾಮಿ ದೊಡ್ಡ ಶಕ್ತಿ. ಈ ಕ್ಷೇತ್ರದಲ್ಲಿ ಭಕ್ತಿಯಿಂದ ಬೇಡಿಕೊಂಡು ಏನಾದರೂ ಸಂಕಲ್ಪ ಮಾಡಿದರೆ ಅದು ಈಡೇರುತ್ತದೆ. ನಾವಿಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ವಿಜಯಶಾಲಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಅದು ಆಗಿಯೇ ತೀರುತ್ತದೆ' ಎಂದರು.

'ವಿಜಯಸಂಕಲ್ಪ ಯಾತ್ರೆಯಿಂದ ನಮ್ಮ ಆತ್ಮ ವಿಶ್ವಾಸ, ಶಕ್ತಿ ಇಮ್ಮಡಿಯಾಗಿದೆ. ಜನ ಸಂಕಲ್ಪದಿಂದ ವಿಜಯ ಸಂಕಲ್ಪ. ವಿಜಯ ಸಂಕಲ್ಪದಿಂದ ದಿಗ್ವಿಜಯವನ್ನು ಬಿಜೆಪಿ ಸಂಪಾದಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು

'ಕೇಂದ್ರ ಹಾಗೂ ರಾಜ್ಯದಲ್ಲಿ ಕನ ಕಲ್ಯಾಣ ಮಾಡಿದ್ದೇವೆ. ಜನರ ಬದುಕಿಗೆ ಅಗತ್ಯವಾದ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಜನಮನ ಗೆಲ್ಲುವ ವಿಶ್ವಾಸವಿದೆ' ಎಂದರು.

140ಕ್ಕೂ ಹೆಚ್ಚು ಸ್ಥಾನ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 'ಬಿಜೆಪಿಯು ರಾಜ್ಯದ ಅಭಿವೃದ್ಧಿಗೆ ಶಕ್ತಿ ‌ಮೀರಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಬಿಜೆಪಿಗೆ ಮೋದಿಯಂತಹ ಪ್ರಧಾನಿ ಇದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ ಅವರಂತಹ ನಾಯಕರಿದ್ದಾರೆ. ಕಾಂಗ್ರೆಸ್ಸಿಗರ ಆಟ ನಡೆಯಲ್ಲ' ಎಂದರು.

'ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ನ 140ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಬಿಜೆಪಿ‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಯಾವುದೇ ಶಕ್ತಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ನಮಗೆ ಇಂದು ಮಲೆ ಮಹದೇಶ್ವರರ ಆಶಿರ್ವಾದ ಸಿಕ್ಕಿದೆ' ಎಂದರು.


'ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಆದರೆ ರಾಜ್ಯದಾದ್ಯಂತ ಓಡಾಡಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದೇನೆ. ತಾಯಂದಿರು, ಅಣ್ಣ ತಮ್ಮಂದಿರು ಬಿಜೆಪಿ ಬೆಂಬಲಕ್ಕೆ ನಿಲ್ಲಬೇಕು' ಎಂದು ಮನವಿ‌ ಮಾಡಿದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಶಾಸಕ ನಿರಂಜನಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.