ADVERTISEMENT

ಸುಳ್ಳು ಭರವಸೆಗಳೇ ಕಾಂಗ್ರೆಸ್‌ ಅಸ್ತ್ರ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 16:00 IST
Last Updated 1 ನವೆಂಬರ್ 2025, 16:00 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ‘ವೋಟ್‌ ಬ್ಯಾಂಕ್‌ ರಾಜಕಾರಣ, ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆ, ಅಪಪ್ರಚಾರಗಳು ಕಾಂಗ್ರೆಸ್‌ ಬತ್ತಳಿಕೆಯ ಅಸ್ತ್ರಗಳು. ಹಾಗಾಗಿಯೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ 134 ಭರವಸೆಯಲ್ಲಿ 9 ಮಾತ್ರ ಈಡೇರಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಶನಿವಾರ ಪ್ರಕಟವಾದ ವರದಿಯನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅವರು, ‘ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್‌.ರಘುನಂದನ್‌ ನೇತೃತ್ವದ ಸಿವಿಕ್‌ ಸಂಘಟನೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜನಸಾಮಾನ್ಯರ ಮೇಲೆ ನಿರಂತರ ತೆರಿಗೆ ಹೊರೆ ಹೇರಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಭ್ರಷ್ಟಾಚಾರದ ವ್ಯಾಪ್ತಿ ಎಲ್ಲೆ ಮೀರಿದೆ ಎನ್ನುವ ಬಿಜೆಪಿ ಆರೋಪವನ್ನು ಸಿವಿಕ್‌ ವರದಿ ಸಾಕ್ಷೀಕರಿಸಿದೆ’ ಎಂದಿದ್ದಾರೆ. 

‘ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಹತ್ತಾರು ಕೈಗಳಿಂದ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ. ರಾಜ್ಯದ ಅಭಿವೃದ್ಧಿ ತುಕ್ಕು ಹಿಡಿದಿದೆ. ಅಧಿಕಾರಕ್ಕೆ ಬರಲು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಬಹುತೇಕ ವಿಫಲವಾಗಿದೆ. ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಕುರ್ಚಿಗಾಗಿ ಆಂತರಿಕ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ ಐದು ವರ್ಷ ಪೂರೈಸಿಬಿಟ್ಟರೆ ರಾಜ್ಯವನ್ನು ದೇವರೇ ಕಾಪಾಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.