ಬೆಂಗಳೂರು: ‘ಮತ ಕಳವು ಅಕ್ರಮದ ಹಿಂದೆ ಇರುವವರು ಬಿಜೆಪಿ ಜತೆ ನಿಂತಿದ್ದಾರೆ. ಅಕ್ರಮದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಬೆಂಗಳೂರಿನ ಪುಲಕೇಶಿ ನಗರದಲ್ಲಿ ಎದ್ದಿರುವ ದನಿ ಇಡೀ ದೇಶಕ್ಕೆ ಕೇಳಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಮತ ಕಳವು ವಿರುದ್ಧ ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಿಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಒಂದೊಂದು ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಜನ ಮತದಾರರು ವಾಸವಿದ್ದಾರೆ. ಅಕ್ರಮವನ್ನು ಪ್ರಶ್ನೆ ಮಾಡಬೇಕು. ಬಯಲಿಗೆ ಎಳೆಯಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇರೇಪಿಸಬೇಕು’ ಎಂದರು.
‘ಒಬ್ಬ ವ್ಯಕ್ತಿ–ಒಂದು ಮತ ಎಂದು ಸಂವಿಧಾನ ಹೇಳಿದೆ. ಸಂವಿಧಾನ ಹೇಳಿದ್ದನ್ನು ಮೀರಿ ಮತ ಕಳವು ಮಾಡಲಾಗುತ್ತಿದೆ. ನಮ್ಮ ಪವಿತ್ರ ಸಂವಿಧಾನವನ್ನು ಎಲ್ಲರೂ ಒಟ್ಟಿಗೆ ಸೇರಿ ರಕ್ಷಿಸಿಕೊಳ್ಳಬೇಕಿದೆ. ನೂರಾರು ಸ್ವಾತಂತ್ರ್ಯ ಹೋರಾಟಗಾರರು ದೇಶದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ್ದಾರೆ. ಅವರಿಂದಾಗಿಯೇ ಪಡೆದ ಸ್ವಾತಂತ್ರ್ಯವನ್ನು ಮತ ಕಳವು ಮೂಲಕ ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ಅಂಬೇಡ್ಕರ್ ನೀಡಿದ ಸಂವಿಧಾನದ ಜತೆ ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿದೆ. ಇದು ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವಲ್ಲ. ರಾಜಕೀಯ ಉದ್ದೇಶದ ಹೋರಾಟವಲ್ಲ. ಈ ದೇಶದ ಸಾಮಾನ್ಯ ಜನರ ಸಂಘರ್ಷ’ ಎಂದು ಬಣ್ಣಿಸಿದರು.
‘ಮತ ಕಳವು ಎಂಬುದು ಈ ದೇಶದ ಮಹಿಳೆಯರು, ಕೂಲಿ ಕಾರ್ಮಿಕರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ, ಸಣ್ಣ ಉದ್ದಿಮೆದಾರರು, ದಿನಸಿ ಅಂಗಡಿ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಮಾಜದ ಸೂಕ್ಷ್ಮ ವರ್ಗದವರ ಮೇಲಿನ ದಾಳಿ. ಕೇವಲ ಮತ ಕಳವು ಮಾತ್ರವಲ್ಲ. ಜನಸಾಮಾನ್ಯರ ಹಕ್ಕಿನ ಕಳವೂ ಆಗಿದೆ. ಮಹದೇವಪುರ ಹಾಗೂ ಆಳಂದ ಕ್ಷೇತ್ರದಲ್ಲಿ ಮತ ಕಳವು ನಡೆದಂತೆ ದೇಶದ ಪ್ರತಿಯೊಂದು ವಿಧಾನಸಭಾ, ಲೋಕಸಭಾ ಕ್ಷೇತ್ರಗಳಲ್ಲೂ ನಡೆಯುತ್ತಿದೆ. ಇದರ ವಿರುದ್ಧ ಐದು ಕೋಟಿಗೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.