ADVERTISEMENT

ಧ್ವಜಸ್ತಂಭದಲ್ಲೂ ಶೇ 40 ಕಮಿಷನ್‌ ಬೇಕೇ?: ಸರ್ಕಾರಕ್ಕೆ ಯು.ಟಿ.ಖಾದರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 16:07 IST
Last Updated 9 ಅಕ್ಟೋಬರ್ 2022, 16:07 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಮಂಗಳೂರು: ‘ಧ್ವಜಸ್ತಂಭ ನಿರ್ಮಿಸಲು ₹ 3.5 ಲಕ್ಷ ಅನುದಾನ ಮೀಸಲಿಡುವಂತೆ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದೆ. ರಾಜ್ಯದಾದ್ಯಂತ ನಿರ್ದಿಷ್ಟ ಗುತ್ತಿಗೆ ಸಂಸ್ಥೆಯ ಮೂಲಕವೇ ಈ ಕಾಮಗಾರಿ ನಡೆಸುವಂತೆ ನಿರ್ದೇಶನ ನೀಡಿದೆ. ಧ್ವಜಸ್ತಂಭದಲ್ಲೂ ಸರ್ಕಾರಕ್ಕೆ ಶೇ 40ರಷ್ಟು ಕಮಿಷನ್‌ ಬೇಕೇ’ ಎಂದುವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಪ್ರಶ್ನಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧ್ವಜಸ್ತಂಭ ನಿರ್ಮಾಣದ ಗುತ್ತಿಗೆಯನ್ನು ನಿರ್ದಿಷ್ಟ ಸಂಸ್ಥೆಗೆ ನೀಡುವ ಕುರಿತು ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರವು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಸಕಾಲದಲ್ಲಿ ನಡೆಸುವಲ್ಲಿ ವಿಫಲವಾಗಿದೆ. ಈಗ ಗ್ರಾಮ ಪಂಚಾಯಿತಿಗಳ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಕಿತ್ತುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ.ಬಿಜೆಪಿಯ ತತ್ವ ಸಿದ್ಧಾಂತಗಳು ಯಾವತ್ತೂ ಅಧಿಕಾರ ವಿಕೇಂದ್ರೀಕರಣದ ವಿರುದ್ಧವಾಗಿವೆ’ ಎಂದು ಖಾದರ್‌ ಆರೋಪಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಲು ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಕಾಂಗ್ರೆಸ್‌ ಅಧ್ಯಯನ ನಡೆಸಿ, ಈ ಕುರಿತು ಹೋರಾಟ ರೂಪಿಸಲಿದೆ’ ಎಂದರು.

‘ತುರ್ತು ಆಂಬುಲೆನ್ಸ್‌ ಸೇವೆ ಕಡೆಗಣನೆ’

‘ತುರ್ತು ಸೇವೆ ಒದಗಿಸುವ 108 ಆಂಬುಲೆನ್ಸ್‌ ಸಿಬ್ಬಂದಿಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಚಾಲಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಮೂರು ತಿಂಗಳುಗಳಿಂದ ಸಂಬಳ ಪಾವತಿ ಆಗಿಲ್ಲ. ಆಂಬುಲೆನ್ಸ್‌ಗಳ ಸಿಬ್ಬಂದಿ ನೇಮಕಾತಿಯೂ ವಿಳಂಬವಾಗಿದೆ. ಇದರಿಂದಾಗಿ ಚಾಲಕರ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಎರಡು ವರ್ಷಗಳಲ್ಲಿ ಹೊಸ ಆಂಬುಲೆನ್ಸ್‌ಗಳನ್ನೂ ಖರೀದಿಸಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಬೈಕ್‌ ಆಂಬುಲೆನ್ಸ್‌ ಸೇವೆಯನ್ನೂ ಸರ್ಕಾರ ಸ್ಥಗಿತಗೊಳಿಸಿದೆ’ ಎಂದು ಖಾದರ್‌ ಆರೋಪಿಸಿದರು.

‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆಯು ಮುಕ್ತಾಯವಾಗುವಾಗುವಷ್ಟರಲ್ಲಿ ದೇಶದ ಹೊಸ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಈ ಯಾತ್ರೆಯ ಯಶಸ್ಸನ್ನು ಜೀರ್ಣಿಸಿಕೊಳ್ಳಲಾಗದೇ ಬಿಜೆಪಿಯು ಜಾಹೀರಾತುಗಳನ್ನು ನೀಡುವ ಮೂಲಕ ಕಾಂಗ್ರೆಸ್‌ನ ಬಗ್ಗೆ ಅಪಪ್ರಚಾರ ಮಾಡುತ್ತಿದೆ’ ಎಂದರು.

‘ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಲು ಕಾಂಗ್ರೆಸ್‌ ನಾಯಕರ ನಡುವೆ ಯಾವುದೇ ಪೈಪೋಟಿ ಇಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ’ ಎಂದು ಖಾದರ್‌ ಹೇಳಿದರು.

‘ಹೊಸ ರೈಲಿಗೆ ಒಡೆಯರ್‌ ಹೆಸರಿಡಲಿಲ್ಲವೇಕೆ‘

‘ಹೊಸ ಸುಸಜ್ಜಿತ ರೈಲಿಗೆ ಒಡೆಯರ್‌ ಹೆಸರು ಇಡಲು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ’ ಎಂದು ಯು.ಟಿ.ಖಾದರ್‌ ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್‌ ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ಮಾಡಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೆಸರಿಡುವ ಬಗ್ಗೆ ನಿರ್ಧಾರ ತಳೆಯುವುದು ಬಿಜೆಪಿಯವರಿಗೆ ಬಿಟ್ಟ ವಿಚಾರ. ಒಡೆಯರ್‌ ಅವರು ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಳೆ ರೈಲಿಗೆ ಹೊಸತಾಗಿ ಪೇಂಟಿಂಗ್‌ ಮಾಡಿ ಅದರ ಹೆಸರನ್ನು ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಬದಲಿಸುವ ಬದಲು ಹೊಸ ರೈಲಿಗೆ ಒಡೆಯರ್‌ ಅವರ ಹೆಸರು ಇಡಬಹುದಿತ್ತು. ಬಿಜೆಪಿ ಅಗ್ಗದ ರಾಜಕೀಯದಿಂದ ಒಡೆಯರ್‌ ಅವರ ಹೆಸರಿಗೆ ಕಪ್ಪು ಚುಕ್ಕೆ ಉಂಟಾಗಬಾರದು’ ಎಂದರು.

‘ಲಂಡನ್‌ನ ಮ್ಯೂಸಿಯಂನಲ್ಲಿ ಹಾಗೂ ಫ್ರಾನ್ಸ್‌ನಲ್ಲಿ ಟಿಪ್ಪುವಿನ ಹೆಸರು ಚಿರಸ್ಥಾಯಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.