ADVERTISEMENT

ವಿಜಯೇಂದ್ರ ತಲೆದಂಡಕ್ಕೆ ವ್ಯೂಹ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಮೇ 2024, 15:45 IST
Last Updated 15 ಮೇ 2024, 15:45 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಅತೃಪ್ತರ ಸೇಡಿನ ಜ್ವಾಲೆ ಸ್ಫೋಟಿಸಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಲೆದಂಡಕ್ಕೆ ಹಲವರು ಕಾದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಆ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ’ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತ ಅತೃಪ್ತ ನಾಯಕರು ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣ ಈ ಸೇಡಿನ ಜ್ವಾಲೆ ಧಗಧಗಿಸಿದರೆ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿ ರಾಜ್ಯ ಘಟಕದ ಮುಕ್ಕಾಲು ಪಾಲು ನಾಯಕರು ವಿಜಯೇಂದ್ರ ತಲೆದಂಡಕ್ಕೆ ವ್ಯೂಹ ರಚನೆಯಲ್ಲಿ ನಿರತರಾಗಿದ್ದಾರೆ. ಚುನಾವಣೆಯ ಹಿನ್ನಡೆಯನ್ನು ತಂದೆ– ಮಕ್ಕಳ ತಲೆಗೆ ಕಟ್ಟಿ, ಅವರನ್ನು ಮೂಲೆಗೆ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಈ ಪ್ರಯತ್ನಕ್ಕೆ ಆರ್‌ಎಸ್‌ಎಸ್‌ನ ಒಂದು ಬಣದ ಆಶೀರ್ವಾದ ಕೂಡ ಇದೆ ಎಂಬುದಾಗಿ ಹೇಳಲಾಗುತ್ತಿದೆ ಎಂದಿದ್ದಾರೆ.

‘ಬಿಜೆಪಿ ಟಿಕೆಟ್‌ ವಂಚಿತ ನಾಯಕರು ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಶಾಶ್ವತವಾಗಿ ಮೂಲೆಗೆ ಸೇರುವ ಆತಂಕದಲ್ಲಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯ ಘಟಕದಲ್ಲಿ ಭಿನ್ನಮತದ ಮಹಾಸ್ಫೋಟ ಆಗಲಿದೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ಭವಿಷ್ಯದ ಬಗ್ಗೆ ಮೊದಲು ಯೋಚಿಸಲಿ. ಪಕ್ಷದ್ರೋಹಿಯಾಗಿರುವ ಅವರ ಪಕ್ಷ ಈ ಚುನಾವಣೆಯಲ್ಲಿ ದೂಳೀಪಟವಾಗಲಿದೆ. ಚುನಾವಣೆ ಬಳಿಕ ಶಿಂಧೆ ಕೂಡ ಮೂಲೆ ಸೇರುವುದು ಖಚಿತ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಬಂಡೆ’ ಸದ್ದು ಮಾಡುತ್ತಿದೆ ಎಚ್ಚರ: ವಿಜಯೇಂದ್ರ

‘ಹೈಕಮಾಂಡ್‌ ಸೂತ್ರ ಧಿಕ್ಕರಿಸುವ ನಿಮ್ಮ ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ. ಅಧಿಕಾರ ಹಂಚಿಕೆ ಕಾಲ ಹತ್ತಿರವಾಗುತ್ತಿದ್ದಂತೆ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸುತ್ತದೆ ಎನ್ನುವುದರ ಸೂಚನೆಯಂತೆ ಕಾಂಗ್ರೆಸ್‌ನ ‘ಬಂಡೆ’ಯೊಂದು ಈಗಾಗಲೇ ಸದ್ದು ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ತಂದೆ– ಮಕ್ಕಳನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡುತ್ತಾರೆ. ವಿಜಯೇಂದ್ರ ತಲೆದಂಡಕ್ಕಾಗಿ ಹಲವರು ಕಾದಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ನೀವು ಮುಖ್ಯಮಂತ್ರಿ ಆಗುವ ವೇಳೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿದ್ದೀರಿ. ಅತಿ ಶೀಘ್ರವೇ ನಿಮ್ಮ ಬಣ ರಾಜಕೀಯದ ಕಿತ್ತಾಟದ ಬಣ್ಣ ಬಯಲಿಗೆ ಬರಲಿದೆ. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಕಾಲವೇ ನಿಮಗೆ ಉತ್ತರ ಹೇಳಲಿದೆ. ಯಾರು ಯಾರ ವಿರುದ್ಧ ಮುಗಿ ಬೀಳುತ್ತಾರೆ? ಯಾರು ಎಲ್ಲಿರುತ್ತಾರೆ ಎಂಬುದನ್ನು ಕೆಲವೇ ದಿನಗಳು ಕಾದು ನೋಡಿ. ಕಾಂಗ್ರೆಸ್‌ ಪಡಸಾಲೆಯಲ್ಲೇ ನಿಮಗೆ ಉತ್ತರ ಸಿಗಲಿದೆ’ ಎಂದರು.

‘ಭಾರತೀಯ ಜನತಾ ಪಕ್ಷ ತತ್ವ ಸಿದ್ಧಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ.  ಕಾಂಗ್ರೆಸ್‌ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ. ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ಅರೆಯಲು ನಮ್ಮ ವರಿಷ್ಠ ಮಂಡಳಿಯು ಸಶಕ್ತವಾಗಿದೆ’ ಎಂದಿದ್ದಾರೆ.

‘ಭಾರತದ ರಾಜಕೀಯ ಭೂಪಟದಲ್ಲಿ ಮಾಸಿ ಹೋಗುತ್ತಿರುವ ನಿಮ್ಮ ಕಾಂಗ್ರೆಸ್‌ ಪಕ್ಷ ಅಧಿಕಾರ ಕಬಳಿಸುವುದನ್ನಷ್ಟೇ ಕೇಂದ್ರೀಕರಿಸಿ ಸುಳ್ಳು ಭರವಸೆಗಳು ಹಾಗೂ ಆಮಿಷಗಳ ಬಲೆ ಹೆಣೆದು ಕರ್ನಾಟಕದಲ್ಲಿ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.