ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳಿರುವುದನ್ನು ಟೀಕಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ʼಆರ್‌ಎಸ್‌ಎಸ್ ಭಾರತ ದೇಶದ ತಾಲಿಬಾನ್ʼ ಎಂದು ಜರಿದರು.
ಶನಿವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ʼದೇಶದಲ್ಲಿ ಶಾಂತಿ ಕದಡಲು ಆರ್‌ಎಸ್‌ಎಸ್ ಯತ್ನಿಸುತ್ತಿದೆ. ಹೀಗಾಗಿ, ಆ ಸಂಘಟನೆಯನ್ನು ತಾಲಿಬಾನ್ ಜತೆಗೆ ಹೋಲಿಸಲು ಇಷ್ಟ ಪಡುತ್ತೇನೆʼ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರದವರು ಪಾಲ್ಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ʼಆರ್‌ಎಸ್‌ಎಸ್ ನೋಂದಣಿ ಆಗಿರುವ ಸಂಘಟನೆ ಅಲ್ಲ. ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರಿಗೆ ಹಣ ಎಲ್ಲಿಂದ ಬರುತ್ತದೆʼ ಎಂದು ಕೇಳಿದರು.
ʼಇತಿಹಾಸವನ್ನು ತಿರುಚುವುದರಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಪ್ರವೀಣರು. ಕಳೆದ 52 ವರ್ಷಗಳಿಂದ ಆರ್‌ಎಸ್‌ಎಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಏಕೆ. ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರನ್ನು ಹೇಳುವುದನ್ನು ಬಿಟ್ಟು ಮೋದಿ ಅವರು ಓಲೈಕೆಗಾಗಿ ಆರ್‌ಎಸ್‌ಎಸ್ ಅನ್ನು ಹೊಗಳಿದ್ದು ಸರಿಯಲ್ಲʼ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.