ADVERTISEMENT

ಕೃಷಿ ಕಾಯ್ದೆ ರದ್ದತಿ ಸೇರಿ ವಿವಿಧ ಬೇಡಿಕೆಗೆ ಆಗ್ರಹ: ರೈತರಿಂದ ಕರಾಳ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 20:42 IST
Last Updated 26 ಮೇ 2021, 20:42 IST
ಕರಾಳ ದಿನದ ಅಂಗವಾಗಿ ಪ್ರತಿಭಟನೆ ವ್ಯಕ್ತಪಡಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು
ಕರಾಳ ದಿನದ ಅಂಗವಾಗಿ ಪ್ರತಿಭಟನೆ ವ್ಯಕ್ತಪಡಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು   

ಬೆಂಗಳೂರು‌: ಕೃಷಿ ಕಾಯ್ದೆ ರದ್ದತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ 6 ತಿಂಗಳು ಪೂರೈಸಿರುವ ಕಾರಣ ಕರೆ ನೀಡಿದ್ದ ಕರಾಳ ದಿನಾಚರಣೆ ಬೆಂಬಲಿಸಿ ಮನೆ–ಮನೆಗಳಲ್ಲೇ ರೈತ ಮತ್ತು ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಕಪ್ಪು ಪಟ್ಟಿ, ಕಪ್ಪು ಮಾಸ್ಕ್ ಧರಿಸಿ, ಕಪ್ಪು ಬಾವುಟ ಮತ್ತು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಕೃಷಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳ ಪ್ರತಿಗಳನ್ನು ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಉಳುಮೆ ಮಾಡುವ ಹೊಲದಲ್ಲೇ ಕಪ್ಪು ಬಾವುಟವನ್ನು ರೈತರು ಪ್ರದರ್ಶಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳ ವರ್ಷ ಪೂರೈಸಿದೆ ಈ ಸಂದರ್ಭದಲ್ಲಿ ರೈತರ ಮರಣ ಶಾಸನ ಬರೆಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿದ್ದ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ಅಂಬಾನಿ ಮತ್ತು ಅದಾನಿಗಳ ಸೇವಕರಾಗಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ಶಾಸನ ಜಾರಿ ಮಾಡಬೇಕು ಎಂದು ಆಗ್ರಹಿಸಿ ದೆಹಲಿಯ ಹೊರ ವಲಯದಲ್ಲಿ 6 ತಿಂಗಳಿಂದ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಚರಿತ್ರಾರ್ಹ ಹೋರಾಟದಲ್ಲಿ 400ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತರನ್ನು ಮಾತುಕತೆಗೆ ಕರೆಯಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಜನ ಸಾಮಾನ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಕಾರ್ಮಿಕ ಪರವಾದ ಕಾನೂನುಗಳಿಗೆ ತಿಲಾಂಜಲಿ ಇಟ್ಟು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅವುಗಳಿಗೆ ಕಾನೂನಿನ ರೂಪ ನೀಡಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒತ್ತಡ ಹಾಕುತ್ತಿದೆ. ಕೈಗಾರಿಕಾ ಬಾಂಧವ್ಯ(ಐಆರ್‌) ಮತ್ತು ವೇತನ ಸಂಹಿತೆಗಳಿಗೆ(ಸಿಒಡಬ್ಲ್ಯು) ಕಾನೂನು ರೂಪಿಸಿ ಜಾರಿ ಮಾಡಲು ಹೊರಟಿದೆ. ಇವುಗಳನ್ನು ಕೂಡಲೇ ತಡೆಹಿಡಿಯಬೇಕು’ ಎಂದು ಒತ್ತಾಯಿಸಿದರು.

‘ಜನರ ಜೀವ ಮತ್ತು ಜೀವನೋಪಾಯ ರಕ್ಷಣೆಗಾಗಿ ಸಾರ್ವತ್ರಿಕವಾಗಿ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ, ದುಡಿಯುವ ವರ್ಗಕ್ಕೆ ಉಚಿತ ದಿನಸಿ ಜತೆಗೆ ₹7,500 ನೀಡಬೇಕು. ಕೃಷಿ ಕಾಯ್ದೆ ಮತ್ತು ಲೇಬರ್ ಕೋಡ್ ವಾಪಸ್ ಪಡೆಯಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಸಂಚಾಲಕ ಕೆ.ವಿ. ಭಟ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.