ADVERTISEMENT

ಕಪ್ಪುಶಿಲೀಂಧ್ರ: ಹೆಚ್ಚಿನ ಜಿಲ್ಲೆಗಳಲ್ಲಿ ಆಗಿಲ್ಲ ಸಿದ್ಧತೆ, ಔಷಧಿ ಕೊರತೆ

ಕೊರೊನಾ ಹಿಂದೆಯೇ ಎದುರಾಗಿರುವ ಸೋಂಕು ಭೀತಿ l ಗ್ರಾಮೀಣ ಭಾಗಕ್ಕೂ ನಿಧಾನವಾಗಿ ಹಬ್ಬುತ್ತಿದೆ ಕಾಯಿಲೆ

​ಪ್ರಜಾವಾಣಿ ವಾರ್ತೆ
Published 24 ಮೇ 2021, 20:56 IST
Last Updated 24 ಮೇ 2021, 20:56 IST
   

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ ಎಂಬ ಆಶಾದಾಯಕ ವರದಿಗಳ ಹಿಂದೆಯೇ, ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳ ಭೀತಿ ಹೆಚ್ಚತೊಡಗಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಚಿಕಿತ್ಸೆ ನೀಡಲು ಸೌಲಭ್ಯಗಳೇ ಇಲ್ಲ. ಈ ಕಾಯಿಲೆ ರಾಜ್ಯದಾದ್ಯಂತ ಹರಡತೊಡಗಿದ್ದು, ಆತಂಕವನ್ನು ಹೆಚ್ಚಿಸಿದೆ.

ಬಹುತೇಕ ಜಿಲ್ಲೆಗಳಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ 21, ಕಲಬುರ್ಗಿ 34 , ತುಮಕೂರು 21 ಮತ್ತು ಕೋಲಾರ ಜಿಲ್ಲೆಯಲ್ಲಿ 20 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ 4, ರಾಯಚೂರು 3, ಮೈಸೂರಿನಲ್ಲಿ ಒಬ್ಬರು ಮೃತಪಟ್ಟಿದ್ದು, ಇವುಗಳಿಗೆ ಕಪ್ಪುಶಿಲೀಂಧ್ರ ಕಾರಣ ಎಂದು ವರದಿಯಾಗಿದೆ.

ಅಧಿಕ ಪ್ರಕರಣಗಳು ವರದಿಯಾಗಿರುವ ಮೈಸೂರು, ಕಲಬುರ್ಗಿ, ಕೋಲಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಔಷಧದ ಕೊರತೆ ಇದೆ. ಕೋಲಾರದಲ್ಲಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಿದ್ದು, ಅಲ್ಲಿಯೂ ಔಷಧ ಲಭ್ಯವಿಲ್ಲ. ಆದರೆ, ತುಮಕೂರಿನಲ್ಲಿ ಔಷಧ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಖಾಸಗಿ ಆಸ್ಪತ್ರೆಗಳವರು ಔಷಧಿ ಪಡೆಯಲು ಸರ್ಕಾರಿ ಪೋರ್ಟಲ್‌ ಮೂಲಕ ಬೇಡಿಕೆಯನ್ನು ಸಲ್ಲಿಸಬೇಕಾಗಿದೆ.ಈ ಪ್ರಕ್ರಿಯೆಯು ಖಾಸಗಿ ಆಸ್ಪತ್ರೆಗಳಲ್ಲಿಯೂ ಔಷಧ ಕೊರತೆಗೆ ಕಾರಣ ಎಂದು ಹೇಳಲಾಗಿದೆ.

ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಈ ಸೋಂಕು ಚಿಕಿತ್ಸೆಗೆ 30 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ವಾರ್ಡ್‌ ರೂಪಿಸಲಾಗಿದೆ. 20 ಹಾಸಿಗೆಗಳು ಕೋವಿಡ್ ಮತ್ತು ಕಪ್ಪು ಶಿಲೀಂಧ್ರ ಪೀಡಿತ ರೋಗಿಗಳಿಗೆ, 10 ಹಾಸಿಗೆಗಳು ಕೋವಿಡ್‌ನಿಂದ ಚೇತರಿಸಿಕೊಂಡಿರುವ ಕಪ್ಪು ಶಿಲೀಂಧ್ರ ಪೀಡಿತ ರೋಗಿಗಳಿಗೆ ಮೀಸಲಿಡಲಾಗಿದೆ. ಇಎನ್‌ಟಿ ಹಾಗೂ ಫೇಸಿಯೊ ಮ್ಯಾಕ್ಸಿಲರಿ ತಜ್ಞರ ನೇಮಕವಾಗಿದೆ. ನೆರೆಯ ಜಿಲ್ಲೆಗಳ ಕಾಯಿಲೆಪೀಡಿತರು ಮೈಸೂರಿನ ‘ಡೊಡ್ಡಾಸ್ಪತ್ರೆ’ ಸೌಲಭ್ಯದ ಮೇಲೇ ಹೆಚ್ಚು ಅವಲಂಬಿತರಾಗಿದ್ದಾರೆ.

ಈ ಜಿಲ್ಲೆಯಲ್ಲಿಯೇ 21 ಪ್ರಕರಣಗಳು ವರದಿಯಾಗಿವೆ. 17 ಮಂದಿ ಕೆ.ಆರ್‌.ಆಸ್ಪತ್ರೆ, ಮೂವರು ಜೆಎಸ್‌ಎಸ್‌ ಆಸ್ಪತ್ರೆ, ಇಬ್ಬರು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಔಷಧದ ಕೊರತೆ ಇದೆ ಎನ್ನುತ್ತಾರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.

ಸೌಲಭ್ಯದ ಕೊರತೆ: ಮಂಡ್ಯ ಜಿಲ್ಲೆಯಲ್ಲಿ 6 ಹಾಸಿಗೆಗಳ ಒಂದು ವಾರ್ಡ್‌ ಮೀಸಲಿದ್ದರೆ, ಚಾಮರಾಜನಗರದಲ್ಲಿ ಚಿಕಿತ್ಸೆಗೆ ಸೌಲಭ್ಯವಿಲ್ಲ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಮೀಸಲಿಟ್ಟಿದ್ದರೂ, ಚಿಕಿತ್ಸೆ ಸೌಲಭ್ಯವಿಲ್ಲ. ಈ ಜಿಲ್ಲೆಯಲ್ಲಿನ ಶಂಕಿತ 7 ರೋಗಿಗಳು ಮೈಸೂರು, ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಡ್ಯದಲ್ಲಿ 3, ಚಾಮರಾಜನಗರಲ್ಲಿ 2, ಹಾಸನದಲ್ಲಿ 7 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಕೊಡಗು ಜಿಲ್ಲೆಯಲ್ಲಿ 10 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಕಲಬುರ್ಗಿ ಜಿಲ್ಲೆಯಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ. ಅವರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. 20 ಮಂದಿ ಜಿಮ್ಸ್‌ನಲ್ಲಿ, 10 ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸ್ಥಾಪಿಸುವ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ.

ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ವಾರ್ಡ್‌ ಇದ್ದು, ಐವರು ರೋಗಿಗಳಿದ್ದಾರೆ. ಈವರೆಗೆ ಮೂವರು ಮೃತ ಪಟ್ಟಿದ್ದಾರೆ. ‘ಆ್ಯಂಫೊಟೆರಿಸಿನ್‌ ಚುಚ್ಚುಮದ್ದು ಬಂದಿಲ್ಲ’ ಎಂದು ರಿಮ್ಸ್‌ ನಿರ್ದೇಶಕ ಡಾ.ಬಸವರಾಜ ಪೀರಾಪುರ ಹೇಳಿದರು.

ಬೀದರ್‌ ಜಿಲ್ಲೆಯಲ್ಲಿ 10 ಪ್ರಕರಣ ಪತ್ತೆಯಾಗಿದೆ. ಬ್ರಿಮ್ಸ್‌ನಲ್ಲಿ 10 ಹಾಸಿಗೆಗಳ ಎರಡು ವಾರ್ಡ್‌ ರೂಪಿಸಲಾಗಿದೆ. ಇಲ್ಲೂ ಚುಚ್ಚುಮದ್ದು ಲಭ್ಯವಿಲ್ಲ. ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಇಲ್ಲ. ಕೊಪ್ಪಳದಲ್ಲಿ ಪ್ರಕರಣ ವರದಿಯಾಗಿಲ್ಲ. ಔಷಧ ಕೊರತೆಯಿದೆ ಎಂದು ಜಿಲ್ಲಾಧಿಕಾರಿ ವಿಕಾಶ್ ಕಿಶೋರ್ ಸುರಳ್ಕರ್ ಹೇಳಿದರು.

ದ.ಕ: ಔಷಧ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 14 ಜನರು ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ 4, ಫಾದರ್‌ ಮುಲ್ಲರ್ಸ್‌ ಆಸ್ಪತ್ರೆ ಮತ್ತು ಕೆಎಂಸಿಯಲ್ಲಿ ತಲಾ ಇಬ್ಬರು ದಾಖಲಾಗಿದ್ದಾರೆ.

ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತ 11 ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಇವರೆಲ್ಲಾ ಬೇರೆ ಜಿಲ್ಲೆಯವರು. ಚಿಕ್ಕಮಗಳೂರಿನ ಇಬ್ಬರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆಗೆ ಅಗತ್ಯ ಪ್ರಮಾಣದ ಔಷಧ ಲಭ್ಯವಿಲ್ಲ. ಖಾಸಗಿ ಆಸ್ಪತ್ರೆಗಳೂ ಔಷಧಿ ಪಡೆಯಲು ಸರ್ಕಾರಿ ಪೋರ್ಟಲ್‌ನಲ್ಲಿ ಬೇಡಿಕೆ ಸಲ್ಲಿಸಬೇಕು. ಖಾಸಗಿಯಲ್ಲೂ ಔಷಧ ಕೊರತೆ ಇದೆ.

ತುಮಕೂರು; ಸದ್ಯ ಕೊರತೆಯಿಲ್ಲ
ಕಪ್ಪುಶಿಲೀಂಧ್ರ ಹೆಚ್ಚಾಗಿ ಪತ್ತೆಯಾಗಿರುವ ಇನ್ನೊಂದು ಜಿಲ್ಲೆ ತುಮಕೂರು. ಸದ್ಯ 21 ಪ್ರಕರಣ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಇದ್ದು, 17ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಜಿಲ್ಲೆಯ ಇತರೆಡೆ, ಬೆಂಗಳೂರಿನಲ್ಲಿ ದಾಖಲಾಗಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರ್ಡ್ ಮೀಸಲಿದೆ. ವಾರ್ಡ್‌ ಮೀಸಲಿಡಬೇಕು ಎಂಬ ಮನವಿಗೆ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಶ್ರೀದೇವಿ ವೈದ್ಯಕೀಯ ಕಾಲೇಜು ಸಮ್ಮತಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ‘ಜಿಲ್ಲೆಯಲ್ಲಿ ಔಷಧಿಯ ಕೊರತೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ರಾಮನಗರ ಜಿಲ್ಲೆಯಲ್ಲಿ ಆರು ಪ್ರಕರಣಗಳು ಪತ್ತೆಯಾಗಿವೆ.ಜಿಲ್ಲಾಸ್ಪತ್ರೆಯಲ್ಲಿ ಐದು ಹಾಸಿಗೆಗಳನ್ನು ಮೀಸಲಿಟ್ಟಿದ್ದರೂ, ಅಲ್ಲಿ ಚಿಕಿತ್ಸೆ ಆರಂಭಗೊಂಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಜಾಗ್ರತೆಯಾಗಿ ವಿಶೇಷ ವಾರ್ಡ್ ತೆರೆಯಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಆಗಿಲ್ಲ, ಚುಚ್ಚುಮದ್ದು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಸಂಪೂರ್ಣವಾಗಿ ಆರ್‌.ಎಲ್‌. ಜಾಲಪ್ಪ ಆಸ್ಪತ್ರೆಯನ್ನು ಅವಲಂಬಿಸಲಾಗಿದೆ.

ಜಾಲಪ್ಪ ಆಸ್ಪತ್ರೆಯಲ್ಲಿ 30 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಈವರೆಗೆ 20 ಮಂದಿ ಸೋಂಕಿತರು ಪತ್ತೆಯಾಗಿದ್ದು, ಅವರೆಲ್ಲರನ್ನೂ ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರು ಹಣ ಪಾವತಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆಗೆ ಬೇಕಾದ ‘ಲಿಪೋಸೋಮಲ್‌ ಆ್ಯಂಫೊಟೆರಿಸಿನ್‌ ಬಿ’ ಚುಚ್ಚುಮದ್ದು ಜಿಲ್ಲೆಯಲ್ಲಿ ಲಭ್ಯವಿಲ್ಲ. ಜಾಲಪ್ಪ ಆಸ್ಪತ್ರೆಯಲ್ಲಿ ಸದ್ಯ ‘ಪೋಸಕಾನಜೋಲ್‌’ ಚುಚ್ಚುಮದ್ದು ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಚುಚ್ಚುಮದ್ದಿಗೂ ಕೊರತೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.