
ನವದೆಹಲಿ: ನೋಂದಾಯಿತ ದಾಖಲೆಗಳು ಮತ್ತು ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಬ್ಲಾಕ್‌ಚೈನ್‌ನಂತಹ ಸುರಕ್ಷಿತ ತಂತ್ರಜ್ಞಾನ ಬಳಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಅಡಮಾನ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಬೀದರ್‌ನ ಹೇಮಲತಾ ಎಂಬವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಹಾಗೂ ಮನಮೋಹನ್ ಅವರ ಪೀಠವು, ‘ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿಸುವ ಪಿಡುಗನ್ನು ಮಟ್ಟ ಹಾಕಲು ಇಂತಹ ಸುಧಾರಣೆ ಅಗತ್ಯ’ ಎಂದು ಅಭಿಪ್ರಾಯಪಟ್ಟಿದೆ.
ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಆಸ್ತಿ ಮಾರಾಟ/ಖರೀದಿ/ವರ್ಗಾವಣೆಯ ದಿನಾಂಕ, ಆಸ್ತಿ ಮೌಲ್ಯ, ಮಾರಾಟಗಾರ/ಖರೀದಿದಾರ ಮೊದಲಾದ ಅಂಶಗಳು ಘಟಕಗಳ ರೂಪದಲ್ಲಿ ದಾಖಲಾಗಿರುತ್ತವೆ. ಡಿಜಿಟಲ್ ರೆಕಾರ್ಡ್ ಬುಕ್ ವ್ಯವಸ್ಥೆಯಾದ ಬ್ಲಾಕ್‌ಚೈನ್ ವ್ಯವಸ್ಥೆಯು ಮಾರಾಟ ಅಥವಾ ಅಡಮಾನ ಅಥವಾ ಅಂತಹುದೇ ವಹಿವಾಟನ್ನು ದಾಖಲಿಸಿದ ನಂತರ ಬದಲಾಗುವುದಿಲ್ಲ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಧುನಿಕ ಆರ್ಥಿಕತೆಯಲ್ಲಿ ವ್ಯವಹಾರ ಸುಲಭಗೊಳಿಸಲು ಮತ್ತು ಆಸ್ತಿ ದಾಖಲೆಗಳ ಪಾವಿತ್ರ್ಯ ಎತ್ತಿ ಹಿಡಿಯಲು ಈ ತಂತ್ರಜ್ಞಾನದ ಅಳವಡಿಕೆ ತುರ್ತು ಅಗತ್ಯ ಎಂದು ಪೀಠ ಪ್ರತಿಪಾದಿಸಿದೆ.
ಹೈಕೋರ್ಟ್‌ನ ಕಲಬುರಗಿ ಪೀಠದ ಆದೇಶವನ್ನು ರದ್ದುಗೊಳಿಸಿರುವ ದ್ವಿಸದಸ್ಯ ಪೀಠವು, ಬೀದರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.