ADVERTISEMENT

ಬಿಎಂಎಸ್‌ ಟ್ರಸ್ಟ್‌ನ ಖಾಸಗಿ ವಿವಿ: ಸದ್ದಿಲ್ಲದೆ ಮಸೂದೆ ಮಂಡಿಸಲು ಮುಂದಾದ ಸರ್ಕಾರ

ಸದ್ದಿಲ್ಲದೆ ಮಸೂದೆ ಮಂಡಿಸಲು ಮುಂದಾದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 21:45 IST
Last Updated 22 ಫೆಬ್ರುವರಿ 2023, 21:45 IST
   

ಬೆಂಗಳೂರು: ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಅಡಿಯಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲು ‘ಬಿಎಂಎಸ್ ವಿಶ್ವವಿದ್ಯಾಲಯ ಕಾಯ್ದೆ –2023’ ರೂಪಿಸುವ ಉದ್ದೇಶದಿಂದ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸದ್ಯ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಈಗಾಗಲೇ ಆರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲಾಗಿದೆ. ಇದೇ ಅಧಿವೇಶನದಲ್ಲಿ ಈ ಮಸೂದೆಯನ್ನೂ ಮಂಡಿಸಲು ತಯಾರಿ ನಡೆದಿದೆ.

ರಾಜ್ಯದಲ್ಲಿ ಸದ್ಯ 34 ಸರ್ಕಾರಿ, 11 ಡೀಮ್ಡ್‌, 24 ಖಾಸಗಿ ಸೇರಿ 69 ವಿಶ್ವವಿದ್ಯಾಲಯಗಳಿವೆ. ಬಿಎಂಎಸ್ ವಿಶ್ವವಿದ್ಯಾಲಯವೂ ಸೇರಿ ಹೊಸದಾಗಿ ಏಳು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಈ ಸಂಖ್ಯೆ 76ಕ್ಕೆ ಏರಲಿದೆ.

ADVERTISEMENT

ಮಸೂದೆ ಪ್ರಕಾರ, ಒಂದು ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯ ಸ್ಥಾಪಿಸುವ ಹಕ್ಕನ್ನು ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ ಹೊಂದಲಿದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ವಿವರಗಳು, ವಿಶ್ವವಿದ್ಯಾಲಯದ ಧ್ಯೇಯೋದ್ದೇಶ, ವಿಶ್ವವಿದ್ಯಾಲಯದ ವ್ಯಾಪ್ತಿ, ಸ್ಥಾನಮಾನ, ಭೂಮಿಯ ಲಭ್ಯತೆ ಮತ್ತು ಟ್ರಸ್ಟ್‌ನ ಹೆಸರಿನಲ್ಲಿರುವ ಭೂಮಿಯ ವಿವರಗಳ ಸಹಿತ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಟ್ರಸ್ಟ್‌ ಪ್ರಸ್ತಾವ ಸಲ್ಲಿಸಬೇಕು. ಮುಂದಿನ ಐದು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯ ಕೈಗೊಳ್ಳಬೇಕೆಂದಿರುವ ಅಧ್ಯಯನ ಮತ್ತು ಸಂಶೋಧನಾ ಕಾರ್ಯಕ್ರಮಗಳ ಸ್ವರೂಪ, ವಿಧ, ಕಟ್ಟಡಗಳು, ಸಲಕರಣೆಗಳು ಮತ್ತು ರಚನಾತ್ಮಕ ಸೌಕರ್ಯಗಳನ್ನು ಒಳಗೊಂಡ ಕ್ಯಾಂಪಸ್‌ ಅಭಿವೃದ್ಧಿ, ಬಂಡವಾಳ, ಸಂಪನ್ಮೂಲ ಸಂಗ್ರಹಣೆಗೆ ಯೋಜನೆ ಈ ಎಲ್ಲ ವಿಷಯಗಳನ್ನೂ ಸಲ್ಲಿಸಬೇಕು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶೋಧನಾ ಸಮಿತಿಯು ಶಿಫಾರಸು ಮಾಡಿದೆ.

ಬಿಎಂಎಸ್ ವಿಶ್ವವಿದ್ಯಾಲಯದ ಕೇಂದ್ರ ಕಾರ್ಯಸ್ಥಾನವು ಬೆಂಗಳೂರಿನ ಬಸವನಗುಡಿಯ ಟೆಂಪಲ್‌ ರಸ್ತೆ ಮತ್ತು ಯಲಹಂಕ ಹೋಬಳಿಯ ಆವಲಹಳ್ಳಿಯಲ್ಲಿ ಇರಲಿದೆ. ಕಾಯ್ದೆಯ ಮೂಲಕ, ವಿಶ್ವವಿದ್ಯಾಲಯ ಸ್ಥಾಪನೆಯಾದ ಐದು ವರ್ಷದ ನಂತರ ಯುಜಿಸಿ ಮತ್ತು ರಾಜ್ಯ ಸರ್ಕಾರದ ಪೂರ್ವಾನುಮತಿಯ ಷರತ್ತಿಗೆ ಒಳಪಟ್ಟು ಕರ್ನಾಟಕದ ಯಾವುದೇ ಭಾಗದಲ್ಲಿ ತನ್ನ ಕ್ಯಾಂಪಸ್‌ ಅಥವಾ ಪ್ರಾದೇಶಿಕ ಕೇಂದ್ರಗಳನ್ನು ಅಧ್ಯಯನ ಕೇಂದ್ರಗಳನ್ನು ಹೊಂದಲು ಅವಕಾಶ ಆಗಲಿದೆ.

ವಾಕ್ಸಮರಕ್ಕೆ ಕಾರಣವಾಗಿದ್ದ ಬಿಎಂಎಸ್‌ ಟ್ರಸ್ಟ್‌

ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಕಾರ್ಯವೈಖರಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಧ್ಯೆ ಭಾರಿ ವಾಕ್ಸಮರಕ್ಕೆ ಕಾರಣವಾಗಿತ್ತು. ಬೈಲಾ ಉಲ್ಲಂಘಿಸಿ ಟ್ರಸ್ಟಿಗಳ ನೇಮಕ, ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿ ಮತ್ತು ಜಮೀನು ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ಕುಮಾರಸ್ವಾಮಿ, ತನಿಖೆಗೆ ಪಟ್ಟು ಹಿಡಿದಿದ್ದರು. ಇದೀಗ, ಅಶ್ವತ್ಥನಾರಾಯಣ ಅವರು ಬಿಎಂಎಸ್ ವಿಶ್ವವಿದ್ಯಾಲಯ ಸ್ಥಾಪನೆಗೆ ಮಸೂದೆ ಮಂಡಿಸಲಿದ್ದು, ಮತ್ತೊಮ್ಮೆ ವಾಗ್ವಾದಕ್ಕೆ ವಸ್ತುವಾಗುವ ಸಾಧ್ಯತೆ ಇದೆ.

‘ದಯಾನಂದ ಪೈ ಮತ್ತು ರಾಗಿಣಿ ನಾರಾಯಣ ಅವರು ಬಿಎಂಎಸ್‌ ಶಿಕ್ಷಣ ಸಂಸ್ಥೆಯ ಸಂಪೂರ್ಣ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರ ಬೆಂಬಲವಿದೆ ಮತ್ತು ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ ಕಾಣದ ಕೈಗಳು ಟ್ರಸ್ಟಿಗಳ ಬದಲಾವಣೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿಸಿಕೊಂಡಿವೆ. ಭಾರಿ ಅಕ್ರಮ ನಡೆದಿರುವುದರಿಂದ ಟ್ರಸ್ಟ್ ಮತ್ತು ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದರು.

ಅದಕ್ಕೆ ಉತ್ತರಿಸಿದ್ದ ಅಶ್ವತ್ಥನಾರಾಯಣ, ‘ಟ್ರಸ್ಟ್‌ನಲ್ಲಿ ಸರ್ಕಾರದ ಅಧಿಕಾರ ಮೊಟಕು ಮಾಡಿಲ್ಲ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಪರಭಾರೆ ಆಗುವುದಿಲ್ಲ. ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದರು. ಗದ್ದಲದಿಂದಾಗಿ ಅಂದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.