ADVERTISEMENT

ಪುಸ್ತಕೋದ್ಯಮಕ್ಕೆ ಜಿಎಸ್‌ಟಿ ‘ಗ್ರಹಣ’- ಅಧಿಕವಾದ ಕರ ಭಾರ, ಕಾಗದದ ಕೊರತೆ

ಅಧಿಕವಾದ ಕರ ಭಾರ, ಕಾಗದದ ಕೊರತೆ l ಓದುಗರಿಗೂ ಬೆಲೆ ಏರಿಕೆ ಬಿಸಿ

ಎಸ್.ರವಿಪ್ರಕಾಶ್
Published 22 ಏಪ್ರಿಲ್ 2022, 19:50 IST
Last Updated 22 ಏಪ್ರಿಲ್ 2022, 19:50 IST
   

ಬೆಂಗಳೂರು: ಜಿಎಸ್‌ಟಿಯ ಅಧಿಕ ಹೊರೆ, ಮುದ್ರಣ ಕಾಗದದ ಕೊರತೆ ಮತ್ತು ಸರ್ಕಾರದ ಅಸಹಕಾರದ ಮಧ್ಯೆ ಕನ್ನಡ ಪುಸ್ತಕೋದ್ಯಮ ನಲುಗಿದೆ. ಮುದ್ರಣ ಕಾಗದ ಇಲ್ಲದೇ ಪುಸ್ತಕಗಳ ಮುದ್ರಣಕ್ಕೂ ಗರ ಬಡಿದಿದೆ!

ಏಪ್ರಿಲ್‌ 23 ವಿಶ್ವ ಪುಸ್ತಕ ದಿನ. ಆದರೆ, ಈ ವರ್ಷ ಈ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸುವ ಸ್ಥಿತಿಯಲ್ಲಿ ಪುಸ್ತಕೋದ್ಯಮಿಗಳೂ ಇಲ್ಲ, ಪುಸ್ತಕದ ಪ್ರೇಮಿಗಳೂ ಇಲ್ಲ. ಏಕೆಂದರೆ, ಪುಸ್ತಕಗಳ ಬೆಲೆ ಏರಿಕೆಯಿಂದ ಗ್ರಾಹಕನ ಜೇಬು ಸುಡುವಂತಾಗಿದೆ.
ಪುಸ್ತ ಕೋದ್ಯಮಿಗಳು ವಿವಿಧ ಸಮಸ್ಯೆಗಳ ಸಂಕಷ್ಟದ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅತಿಥಿ ಗಳಿಗೆ ಸರ್ಕಾರದ ವತಿಯಿಂದ ಹಾರ–ತುರಾಯಿಗಳ ಬದಲಿಗೆ ಪುಸ್ತಕಗಳನ್ನುಕೊಡುಗೆಯಾಗಿ ನೀಡುವ ಹೊಸ ಪರಂ ಪರೆಗೆ ನಾಂದಿ ಹಾಡಿದರೂ, ಆ ಬಳಿಕ ಪುಸ್ತಕೋದ್ಯಮಕ್ಕೆ ಹೆಚ್ಚಿನ ಅನುಕೂಲ ಮಾಡಿಲ್ಲ ಎಂಬ ಕೊರಗು ಈ ವಲಯದಲ್ಲಿದೆ.

ADVERTISEMENT

ಜಿಎಸ್‌ಟಿಯ ಹೊರೆ: ಪುಸ್ತ ಕೋದ್ಯಮಕ್ಕೆ ಜಿಎಸ್‌ಟಿ ಹೊರೆ ಅಧಿಕವಾಗಿದೆ. ರಾಯಧನದ (ರಾಯಲ್ಟಿ) ಮೇಲೆ ಜಿಎಸ್‌ಟಿ ಶೇ 12 ರಿಂದ ಶೇ 18 ಕ್ಕೆ ಏರಿಕೆ ಮಾಡಲಾಗಿದೆ. ಮುದ್ರಣ ಕಾಗದದ ಮೇಲಿನ ಜಿಎಸ್‌ಟಿ ಶೇ 5 ರಿಂದ ಶೇ 18 ಕ್ಕೆ ಏರಿಕೆ ಆಗಿದೆ. ಜಾಬ್‌ ವರ್ಕ್‌ ಜಿಎಸ್‌ಟಿಯೂಶೇ 18 ಕ್ಕೆ ನಿಗದಿ ಮಾಡಲಾಗಿದೆ. ಇವೆಲ್ಲದರ ಪರಿಣಾಮ ₹200 ಬೆಲೆಯ ಪುಸ್ತಕಕ್ಕೆ ₹400 ನಿಗದಿ ಮಾಡಬೇಕಾಗಿದೆ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪುಸ್ತಕ ಅಂತಿಮ ಉತ್ಪನ್ನ ವಾಗಿ ಹೊರ ಬರುವುದಕ್ಕೂ ಮೊದಲೇ ಜಿಎಸ್‌ಟಿ ಪಾವತಿಸಬೇಕು.ಒಂದು ಅಂದಾಜಿನ ಪ್ರಕಾರ ₹400 ಮುಖ ಬೆಲೆ ಇರುವ ಪುಸ್ತಕದ ಒಂದು ಸಾವಿರ ಪ್ರತಿ ಮುದ್ರಿಸುವುದಾದಲ್ಲಿ ₹7,200 ರಾಯಧನ(ರಾಯಲ್ಟಿ) ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಪುಸ್ತಕೋದ್ಯಮ ಮೇಲಿನ ಜಿಎಸ್‌ಟಿ ಕೈಬಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆರಾಷ್ಟ್ರೀಯ ಮಟ್ಟದಲ್ಲೇ ಮನವಿ ಸಲ್ಲಿಸ ಲಾಗಿದೆ. ಈ ಹೊರೆಯಿಂದ ಮುಕ್ತಿ ಸಿಗಬೇಕು ಎಂದರು.

ಮುದ್ರಣ ಕಾಗದ ಸಿಗುತ್ತಿಲ್ಲ: ‘ರಷ್ಯಾ–ಉಕ್ರೇನ್‌ ಯುದ್ಧ ಮತ್ತುಚೀನಾದಲ್ಲಿ ಕೋವಿಡ್‌ ಕಾರಣದಿಂದ ಈಗ ಪುಸ್ತಕ ಮುದ್ರಣ ಕಾಗದ ಸಿಗುತ್ತಿಲ್ಲ. ಕಾಗದದ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಹೆಚ್ಚು ಬೆಲೆ ಕೊಡುತ್ತೇವೆ ಎಂದರೂ ಕಾಗದ ಸಿಗದ ಸ್ಥಿತಿ ನಿರ್ಮಾಣವಾಗಿದೆ.ಪುಸ್ತಕ ಮುದ್ರಣ ನಿಲ್ಲುವ ಸ್ಥಿತಿ ಬಂದಿದೆ’ ಎಂದು ಅವರು ಹೇಳಿದರು.

ಗ್ರಂಥಾಲಯ ಇಲಾಖೆ ಏಕ ಗವಾಕ್ಷಿ ಯೋಜನೆಯಡಿ ಪುಸ್ತಕಗಳನ್ನು ಖರೀದಿ ಮಾಡುತ್ತದೆ. 2019ರ ಸಾಲಿಗೆಖರೀದಿ ಮಾಡಿದೆ. ಆ ಬಳಿಕ ಖರೀದಿ ಆಗಿಲ್ಲ. 2019 ರಲ್ಲಿ ಖರೀದಿ ಮಾಡಿದ ಬಿಲ್‌ ₹18 ಕೋಟಿ. ಇದರಲ್ಲಿ ₹5.90 ಕೋಟಿ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದೆ. ಉಳಿದ ₹12 ಕೋಟಿ ಬಿಲ್‌ ಪಾವತಿ ಆಗಿಲ್ಲ. ಅಲ್ಲದೆ, ಪುಸ್ತಕ ಬೆಲೆ ನಿಗದಿಯೂ ಪರಿಷ್ಕರಣೆ ಆಗಿಲ್ಲ.ಒಂದು ಪುಟಕ್ಕೆ 70 ಪೈಸೆ ನಿಗದಿ ಮಾಡಿ ಹಲವು ವರ್ಷಗಳೇ ಕಳೆದಿವೆ. ಅದನ್ನು ಪರಿಷ್ಕರಿಸಿಲ್ಲ.₹1 ಮಾಡಬೇಕು ಎಂಬುದು ನಮ್ಮ ಬೇಡಿಕೆ ಎಂದು ಕಂಬತ್ತಹಳ್ಳಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.