ADVERTISEMENT

ಇ-ಸ್ವತ್ತು ಸಮಸ್ಯೆ: ಕಂದಾಯ ಇಲಾಖೆ ಜತೆ ಚರ್ಚೆ–ಪ್ರಿಯಾಂಕ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 14:43 IST
Last Updated 14 ಫೆಬ್ರುವರಿ 2024, 14:43 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

(ಸಂಗ್ರಹ ಚಿತ್ರ)

ಬೆಂಗಳೂರು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇ–ಸ್ವತ್ತು ಸಮಸ್ಯೆ ನಿವಾರಿಸಲು ಸದ್ಯದಲ್ಲೇ ಕಂದಾಯ ಸಚಿವರ ಜತೆ ಸೇರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಚ್‌.ಡಿ ತಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,543 ಪ್ರಕರಣಗಳಿವೆ ಎಂದು ಹೇಳಿದರು.

ADVERTISEMENT

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್‌ ಅಧ್ಯಕ್ಷ, ಗ್ರಾಮಠಾಣಾ ಮತ್ತು ಆಶ್ರಯ ಯೋಜನೆ ಎಂದು ಪಹಣಿಯಲ್ಲಿ ನಮೂದಾಗಿದೆ. ಈ ಜಮೀನಿನಲ್ಲಿ ಸಾರ್ವಜನಿಕರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಪ್ರಿಯಾಂಕ್‌ ಹೇಳಿದರು.

ಪ್ರಸ್ತುತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ಇ– ಸ್ವತ್ತು ತಂತ್ರಾಂಶದ ಮೂಲಕ ನಮೂನೆ–9 ಮತ್ತು 11 ಎ ಯನ್ನು ಪಡೆಯಲು ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದರೆ ಪಿಡಿಒ ಅವರು ಡಿಜಿಟಲ್‌ ಸಹಿಯ ಮೂಲಕ ನಮೂನೆ–9 ಮತ್ತು 11 ಎ ವಿತರಿಸುತ್ತಾರೆ ಎಂದರು.

ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ–ಸ್ವತ್ತು ತಂತ್ರಾಂಶದ ನಮೂನೆ 11 ಬಿ ಯನ್ನು ಪಡೆಯಲು ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಲ್ಲಿ ಪಿಡಿಒ ಅವರು ಡಿಜಿಟಲ್‌ ಸಹಿಯ ಮೂಲಕ ನಮೂನೆ 11 ಬಿ ವಿತರಿಸುತ್ತಾರೆ. ಉತ್ತರ ಕನ್ನಡ, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ–ಸ್ವತ್ತು ತಂತ್ರಾಂಶದ ಮೂಲಕ ವಿತರಿಸುವುದಕ್ಕೆ ವಿನಾಯಿತಿ ನೀಡಿ ನಮೂನೆ 11 ಬಿ ಯನ್ನು ಕೈಬರಹದ ಮೂಲಕ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್‌ ಹೇಳಿದರು.

ಸವಳು ಸಮಸ್ಯೆ ನಿವಾರಣೆಗೆ ₹13 ಕೋಟಿ:

ರಾಜ್ಯದಲ್ಲಿ ಸವಳು–ಜವಳು ಜಮೀನು 41,816 ಹೆಕ್ಟೇರ್‌ ಇದ್ದು, ಈ ಸಮಸ್ಯೆ ನಿವಾರಣೆ ಮತ್ತು ಸುಧಾರಣಾ ಕ್ರಮಗಳಿಗೆ ₹13 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಕಾಂಗ್ರೆಸ್‌ನ ಭರಮಗೌಡ ಅಲಗೌಡ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿ, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸವಳು–ಜವಳು ಭೂಮಿ ಇದೆ. ಅದರಲ್ಲೂ ವಿಶೇಷವಾಗಿ ಕಾಗವಾಡ ಕ್ಷೇತ್ರವೊಂದರಲ್ಲೇ 1150 ಹೆಕ್ಟೇರ್‌ ಇದೆ. ಕಾಗವಾಡದಲ್ಲಿ ಸವಳು–ಜವಳು ಭೂಮಿ ಪರಿಹಾರಕ್ಕೆ  ₹58 ಲಕ್ಷ ಒದಗಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.