ADVERTISEMENT

ಬಿಜೆಪಿ ಮುಖ್ಯ ಕಚೇರಿಗೆ ಹುಸಿ ಬಾಂಬ್‌ ಕರೆ: ಮೈಸೂರಿನ ವೃದ್ಧ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 16:55 IST
Last Updated 22 ಜೂನ್ 2019, 16:55 IST

ಮೈಸೂರು: ನವದೆಹಲಿಯ ಬಿಜೆಪಿ ಮುಖ್ಯ ಕಚೇರಿಗೆ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ, ಮೈಸೂರಿನ ಸುಗಂಧರಾಜ (85) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಿಜೆಪಿಯ ಮುಖ್ಯ ಕಚೇರಿಗೆ ಶನಿವಾರ ಮಧ್ಯಾಹ್ನ ಬಾಂಬ್ ಇಡಲಾಗಿದೆ ಎಂಬ ಕರೆ ಬಂದಿತು. ನಂತರ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತು. ಕರೆ ಬಂದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ನಡೆಸಿದಾಗ ಈ ಕರೆಯು ಮೈಸೂರಿನಿಂದ ಬಂದಿರುವುದು ಗೊತ್ತಾಯಿತು. ವಿಷಯ ತಿಳಿಯುತ್ತಲೇ ಚುರುಕಿನ ಕಾರ್ಯಾಚರಣೆ ನಡೆಸಿದ ನಗರದ ಪೊಲೀಸರು, ಸಿದ್ಧಾರ್ಥ ನಗರದ ಬುದ್ಧಮಾರ್ಗದ ನಿವಾಸಿ ಸುಗಂಧರಾಜ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಈ ವ್ಯಕ್ತಿಯ ಮೊಬೈಲ್‌ ಫೋನ್‌ನಲ್ಲಿ ವಿವಿಧ ಪಕ್ಷಗಳ ಕಚೇರಿಯ ಹಾಗೂ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆಗಳಿದ್ದು, ಶನಿವಾರ ಮಧ್ಯಾಹ್ನ ನಗರದ ವಿವಿಧ ಪೊಲೀಸ್ ಠಾಣೆಗಳಿಗೂ ಇದೇ ರೀತಿ ಹುಸಿ ಕರೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ ಮುತ್ತುರಾಜ್, ‘ಈ ವ್ಯಕ್ತಿಯ ಮಾತುಗಳು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಇವೆ. ಇವರಿಗೆ 80ರಿಂದ 85 ವರ್ಷ ವಯಸ್ಸಾಗಿದ್ದು, ಕಿವಿ ಹಾಗೂ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.