ADVERTISEMENT

ವಿಧಾನಸೌಧದಲ್ಲಿ ಪುಸ್ತಕ ಮೇಳ: ಶಕ್ತಿಸೌಧ ಕಣ್ತುಂಬಿಕೊಂಡ ಜನತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 15:42 IST
Last Updated 28 ಫೆಬ್ರುವರಿ 2025, 15:42 IST
ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು  ಭೇಟಿ ನೀಡಿದರು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು  ಭೇಟಿ ನೀಡಿದರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುಸ್ತಕ ಮೇಳ’ಕ್ಕೆ ಭೇಟಿ ನೀಡಿದ ಸಾಮಾನ್ಯ ಜನರು, ನಾಡಿನ ಶಕ್ತಿಸೌಧವನ್ನು ಕಣ್ತುಂಬಿಕೊಂಡರು.

ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಸೀಮಿತವಾಗಿದ್ದ ವಿಧಾನಸೌಧದ ಆವರಣಕ್ಕೆ, ಮೊದಲ ಬಾರಿಗೆ ಸಾರ್ವಜನಿಕರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರಣದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶುಕ್ರವಾರ ವಿಧಾನಸೌಧಕ್ಕೆ ಬಂದಿದ್ದರು. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್, ಅಧಿವೇಶನ ನಡೆಯುವ ಸಭಾಂಗಣವನ್ನು ವೀಕ್ಷಿಸಿ, ಸಂತಸಪಟ್ಟರು. ಆವರಣದಲ್ಲಿ ಹೂವಿನಿಂದ ಕಂಗೊಳಿಸುತ್ತಿರುವ ಮರಗಳು, ಗಿಡಗಳು, ಹೋರಾಟಗಾರರು, ರಾಜಕೀಯ ನಾಯಕರ ಪ್ರತಿಮೆಗಳ ಎದುರು ವಿದ್ಯಾರ್ಥಿಗಳು, ಸಾರ್ವಜನಿಕರು ನಿಂತು ಮೊಬೈಲ್‌ನಲ್ಲಿ ಫೋಟೊ ತೆಗೆಸಿಕೊಂಡರು. ವೇದಿಕೆಯಲ್ಲಿ ನಡೆಯುತ್ತಿದ್ದ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ವಿಧಾನಸೌಧದ ಆವರಣದಲ್ಲಿ 151 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಪುಸ್ತಕ ಪ್ರಿಯರಿಗೆ ಇದೊಂದು ಹಬ್ಬವಾಗಿದ್ದು, ಮಳಿಗೆಗಳಿಗೆ ಭೇಟಿ ನೀಡಿ, ತಮ್ಮ ಇಷ್ಟದ ಲೇಖಕರ ಪುಸ್ತಕಗಳನ್ನು ಖರೀದಿಸಿದರು. ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಮಳಿಗೆಗಳಲ್ಲಿ ಪುಸ್ತಕ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂತು. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಲಭ್ಯವಿವೆ. 

ಮಾರ್ಚ್ 2ರವರೆಗೂ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮೇಳ ನಡೆಯಲಿದೆ. ಪುಸ್ತಕ ಪ್ರದರ್ಶನ, ಸಂವಾದ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹೊಸ ಪುಸ್ತಕಗಳ ಬಿಡುಗಡೆ ಮಾಡಲು ಮೇಳದಲ್ಲಿ ಒಂದು ಮಳಿಗೆ ಮೀಸಲಿಡಲಾಗಿದೆ.

ಮಳಿಗೆಗಳಲ್ಲಿ ಪುಸ್ತಕ ವೀಕ್ಷಿಸಿದ ಪೊಲೀಸ್ ಸಿಬ್ಬಂದಿ. 

‘ಪುಸ್ತಕ ಮೇಳದ ಅಂಗವಾಗಿ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಅನುದಾನದಲ್ಲಿ ₹2 ಲಕ್ಷ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. 

ಪುಸ್ತಕ ಮೇಳಕ್ಕೆ ಎಲ್ಲಾ ಗೇಟ್‌ಗಳಿಂದ ಮುಕ್ತ ಪ್ರವೇಶ ಎಂಬುದಾಗಿ ತಿಳಿಸಲಾಗಿತ್ತು. ಆದರೆ, ಭದ್ರತೆಯ ದೃಷ್ಟಿಯಿಂದ ಒಂದು ಗೇಟ್‌ನಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದರಿಂದ ಜನರು ಬಿಸಿಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದರು. ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳಗೆ ಬಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.