ADVERTISEMENT

ಗ್ರಾಮ ವಾಸ್ತವ್ಯದ ಬಗ್ಗೆ ಶ್ವೇತಪತ್ರ ಪ್ರಕಟಿಸಿ: ಸರ್ಕಾರಕ್ಕೆ ಯಡಿಯೂರಪ್ಪ ಸವಾಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 16:39 IST
Last Updated 24 ಜೂನ್ 2019, 16:39 IST
ಬೆಂಗಳೂರಿನಲ್ಲಿ ಸೋಮವಾರ ಬಿ.ಎಸ್‌.ಯಡಿಯೂರಪ್ಪ ಅವರು ‘ಮತ್ತೆ ಗ್ರಾಮ ವಾಸ್ತವ್ಯದ ಡ್ರಾಮಾ!’ ಕಿರುಹೊತ್ತಗೆ ಬಿಡುಗಡೆಗೊಳಿಸಿದರು. ಕೋಟ ಶ್ರೀನಿವಾಸ ಪೂಜಾರಿ, ಡಾ.ಎ.ಬಿ.ಮಾಲಕ ರಡ್ಡಿ, ಎನ್‌.ರವಿಕಮಾರ್‌, ಲೆಹರ್‌ ಸಿಂಗ್‌, ವಿ.ವೈ.ವಿಜಯೇಂದ್ರ ಇದ್ದರು. ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಸೋಮವಾರ ಬಿ.ಎಸ್‌.ಯಡಿಯೂರಪ್ಪ ಅವರು ‘ಮತ್ತೆ ಗ್ರಾಮ ವಾಸ್ತವ್ಯದ ಡ್ರಾಮಾ!’ ಕಿರುಹೊತ್ತಗೆ ಬಿಡುಗಡೆಗೊಳಿಸಿದರು. ಕೋಟ ಶ್ರೀನಿವಾಸ ಪೂಜಾರಿ, ಡಾ.ಎ.ಬಿ.ಮಾಲಕ ರಡ್ಡಿ, ಎನ್‌.ರವಿಕಮಾರ್‌, ಲೆಹರ್‌ ಸಿಂಗ್‌, ವಿ.ವೈ.ವಿಜಯೇಂದ್ರ ಇದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಗ್ರಾಮ ವಾಸ್ತವ್ಯ ಸಂಪೂರ್ಣ ವಿಫಲ ಪ್ರಯೋಗ. ಎಲ್ಲಿಯೂ ಕೊಟ್ಟ ಭರವಸೆ ಈಡೇರಲೇ ಇಲ್ಲ. ಇದೀಗ ಮತ್ತೆ ಅಂತಹದೇ ‘ನಾಟಕ’ ಆಡುವ ಮೊದಲು ಹಳೆಯ ಗ್ರಾಮ ವಾಸ್ತವ್ಯದ ಶ್ವೇತಪತ್ರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘13 ತಿಂಗಳು ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಿಂದ ಆಡಳಿತ ನಡೆಸಿದ ಕುಮಾರಸ್ವಾಮಿ ಅವರ ದುರಾಡಳಿತದ ಫಲವಾಗಿಯೇ 1,500ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಂಎ ಹಗರಣದಲ್ಲಿಸಿಲುಕಿಕೊಂಡವರಿಗೆ ರಕ್ಷಣೆ ನೀಡಲಾಗಿದೆ. ಇದೀಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಜ್ಞಾನೋದಯ ತಾಜ್‌ ಹೋಟೆಲ್‌ನಲ್ಲಿ ಆಯಿತೇ?’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಇಲ್ಲಿ ‘ಮತ್ತೆ ಗ್ರಾಮ ವಾಸ್ತವ್ಯ ಡ್ರಾಮಾ’ ಕಿರುಹೊತ್ತಗೆ ಬಿಡುಗಡೆಗೊಳಿಸಿ ಮಾತನಾಡಿದರು.

‘ನಮ್ಮ ಜತೆಗೆ 20 ತಿಂಗಳು ಅಧಿಕಾರ ನಡೆಸಿದ್ದ ಕುಮಾರಸ್ವಾಮಿ 42 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದರು. ಆದರೆ ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಬಹುತೇಕ ಯಾವ ಭರವಸೆಗಳೂ ಅಲ್ಲಿ ಈಡೇರಿಲ್ಲ. ವಿಜ್ಞಾನ ತಂತ್ರಜ್ಞಾನ ಪ್ರಗತಿಯಾಗಿರುವ ಇಂದು ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿಲ್ಲ. ಇದೆಲ್ಲ ಪ್ರಚಾರದ ತಂತ್ರವಷ್ಟೇ’ ಎಂದು ಅವರು ಖಾರವಾಗಿ ನುಡಿದರು.

ಮುಖ್ಯಮಂತ್ರಿ ಅವರಿಗೆ 10 ಪ್ರಶ್ನೆಗಳನ್ನು ಎಸೆದ ಯಡಿಯೂರಪ್ಪ, 48 ಗಂಟೆಯಲ್ಲಿ ರೈತರ ₹ 48 ಸಾವಿರ ಸಾಲ ಮನ್ನಾ ಮಾಡುವುದಾಗಿ ಹೇಳಿದವರು 13 ತಿಂಗಳ ಬಳಿಕವೂ ಮನ್ನಾ ಮಾಡಿಲ್ಲ ಏಕೆ? ತೀವ್ರ ಬರಗಾಲದ ಇಂದಿನ ದಿನಗಳಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ? ಗ್ರಾಮ ವಾಸ್ತವ್ಯದಲ್ಲಿ ಹೇಳುವ ಭರವಸೆಗಳಿಗೆ ಬಜೆಟ್‌ನಲ್ಲಿ ಎಷ್ಟು ಹಣ ತೆಗೆದಿರಿಸುತ್ತೀರಿ? ರಾಜ್ಯವನ್ನು ಹಗಲುದರೋಡೆ ಮಾಡುತ್ತಲೇ, ಅಭಿವೃದ್ಧಿ ಮಾಡುತ್ತೇವೆಂಬ ಭ್ರಮೆಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಪುಸ್ತಕದಲ್ಲಿ ಏನಿದೆ?: 24 ಪುಟಗಳ ಕಿರುಹೊತ್ತಗೆಯಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ ಎಲ್ಲ 42 ಗ್ರಾಮಗಳಿಗೆ ತರಳಿ, ಅಲ್ಲಿ ಕಂಡ ಈಗಿನ ಸ್ಥಿತಿಗತಿಯನ್ನು ಚಿತ್ರ ಸಹಿತ ತೋರಿಸಲಾಗಿದೆ. ಅಂದು ಕೊಟ್ಟ ಭರವಸೆಗಳನ್ನು ಸಹ ತಿಳಿಸಿ, ಯಾವ ಕೆಲಸ ಆಗಿದೆ, ಯಾವುದು ಆಗಿಲ್ಲ ಎಂಬುದನ್ನು ತಿಳಿಸಲಾಗಿದೆ. ಸ್ವತಃ ರಾಮನಗರ ಜಿಲ್ಲೆಯ ಜಟ್ಟಿದೊಡ್ಡಿ ಗ್ರಾಮದಲ್ಲೇಬಹುತೇಕ ಭರವಸೆಗಳು ಪೊಳ್ಳು ಎಂಬುದನ್ನು ಬೆಟ್ಟುಮಾಡಿ ತೋರಿಸಲಾಗಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಸ್ವತಃ ಹಲವು ಜಿಲ್ಲೆಗಳಿಗೆ ತೆರಳಿ ವರದಿ ಸಿದ್ಧಪಡಿಸಿದ್ದರು. ಉಳಿದಂತೆ ಆಯಾ ಜಿಲ್ಲಾ ಸಮಿತಿಗಳಿಂದ ವರದಿ ತರಿಸಿಕೊಂಡು ಈ ಕಿರುಹೊತ್ತಗೆ ಸಿದ್ಧಪಡಿಸಲಾಗಿದೆ.

‘ಸಿಎಂ ಕನಸು ನನಗಿಲ್ಲ’
‘ನಾನು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಆ ಕನಸನ್ನು ಈಗಲೂ ಕಾಣುತ್ತಿರುವವರು ಸಿದ್ದರಾಮಯ್ಯ ಅವರೇ’ ಎಂದು ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.