ADVERTISEMENT

ಗಡಿಭಾಗದ ಸಮಸ್ಯೆ | ವಿಶೇಷಾಧಿಕಾರಿ ನೇಮಿಸಿ: ರಾಷ್ಟ್ರಪತಿಗೆ ಬಿಳಿಮಲೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 16:03 IST
Last Updated 27 ಫೆಬ್ರುವರಿ 2025, 16:03 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಬೆಳಗಾವಿ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ದಾಖಲಾಗುವ ಅಂತರರಾಜ್ಯ ಗಲಭೆಗಳನ್ನು ಸಮರ್ಥವಾಗಿ ಹತ್ತಿಕ್ಕಲು ಸಂವಿಧಾನವೇ ಅವಕಾಶ ಕಲ್ಪಿಸಿದ್ದು, ಕೇಂದ್ರ ಸರ್ಕಾರವು ವಿಶೇಷಾಧಿಕಾರಿಯನ್ನು ನೇಮಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ‘ಗಡಿ ಪ್ರದೇಶಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರು, ಬಹುಸಂಖ್ಯಾತರೊಂದಿಗೆ ಸಾಮರಸ್ಯದ ಜೀವನ ನಡೆಸುವಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಸಂವಿಧಾನದ 350 (ಬಿ) ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಕೇಂದ್ರ ಸರ್ಕಾರವು ವಿಶೇಷಾಧಿಕಾರಿಯನ್ನು ನೇಮಿಸಬೇಕಿದೆ’ ಎಂದಿದ್ದಾರೆ.

‘ನೇಮಕಗೊಳ್ಳುವ ವಿಶೇಷಾಧಿಕಾರಿಯು ಗಡಿ ಭಾಗಗಳಲ್ಲಿ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಕೂಲಂಕುಷವಾಗಿ ಅಧ್ಯಯನ ನಡೆಸಬೇಕು. ಸಮಸ್ಯೆವಾರು ವಿವರಗಳನ್ನು ಸಿದ್ಧಪಡಿಸಿ, ರಾಷ್ಟ್ರಪತಿ ಅವರಿಗೆ ಸಲ್ಲಿಸಬೇಕು. ರಾಷ್ಟ್ರಪತಿ ಅವರು ಅದನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಮಂಡಿಸಲು ನಿರ್ದೇಶಿಸಬಹುದಾಗಿದ್ದು, ಕೇಂದ್ರ ಸರ್ಕಾರವು ವರದಿಯ ಆಧಾರದಲ್ಲಿ ಉಭಯ ರಾಜ್ಯಗಳ ಗಡಿ ಹಿಂಸಾಚಾರಗಳನ್ನು ಹತ್ತಿಕ್ಕುವಲ್ಲಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಗಲಭೆ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಅಲ್ಲಿನ ಸಮಸ್ಯೆ ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ತೀವ್ರವಾಗಿದ್ದು, ಎರಡೂ ರಾಜ್ಯಗಳ ಆಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಜತೆಗೆ ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಈ ಅರ್ಥಹೀನ ಗಲಭೆಗಳಿಗೆ ಇತಿಶ್ರೀ ಹಾಡಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕು’ ಎಂದೂ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.