ADVERTISEMENT

ಬೋವಿ ನಿಗಮದ ಅಕ್ರಮ: ಲೀಲಾವತಿ ಬಂಧನ

₹97 ಕೋಟಿ ಅಕ್ರಮ ವರ್ಗಾವಣೆ ಪ್ರಕರಣ: ಏಳು ದಿನಗಳ ಇ.ಡಿ ಕಸ್ಟಡಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:30 IST
Last Updated 16 ಏಪ್ರಿಲ್ 2025, 14:30 IST
ಆರ್‌.ಲೀಲಾವತಿ
ಆರ್‌.ಲೀಲಾವತಿ   

ಬೆಂಗಳೂರು: ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್‌.ಲೀಲಾವತಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ.

2018–2023ರ ನಡುವೆ ನಿಗಮದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಫಲಾನುಭವಿಗಳ ಹೆಸರಿನಲ್ಲಿ ಮತ್ತು ಗುತ್ತಿಗೆ ಪಡೆದ ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ₹97 ಕೋಟಿಯನ್ನು ವರ್ಗಾವಣೆ ಮಾಡಲಾಗಿತ್ತು. ಆ ಅವಧಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಿ.ಕೆ.ನಾಗರಾಜಪ್ಪ ಮತ್ತು ಆರ್‌.ಲೀಲಾವತಿ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಇ.ಡಿ ತಿಳಿಸಿದೆ.

ಈ ಪ್ರಕರಣದಲ್ಲಿ ನಾಗರಾಜಪ್ಪ ಅವರನ್ನು 14 ದಿನಗಳ ಕಸ್ಟಡಿಗೆ ಪಡೆಯಲಾಗಿದೆ. ನಾಗರಾಜಪ್ಪ, ಲೀಲಾವತಿ ಮತ್ತು ನಿಗಮದ ಸಿಬ್ಬಂದಿಯಾಗಿದ್ದ ಸುಬ್ಬಪ್ಪ ಎನ್ನುವವರು ಸಂಚು ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಏಪ್ರಿಲ್‌ 4, 5 ಮತ್ತು 6ರಂದು ನಡೆಸಿದ ಶೋಧಕಾರ್ಯದ ವೇಳೆ ಈ ಅಕ್ರಮವನ್ನು ಪುಷ್ಟೀಕರಿಸುವ ಹಲವು ದಾಖಲೆಗಳು ಲಭ್ಯವಾಗಿವೆ ಎಂದು ಇ.ಡಿ ಹೇಳಿದೆ.

ADVERTISEMENT

ಲೀಲಾವತಿ ಅವರು ತಮ್ಮ ಸೋದರಿ ಮಂಗಳಾ ರಾಮು ಅವರ ಖಾತೆಗೆ ನಿಗಮದ ಹಣವನ್ನು ವರ್ಗಾವಣೆ ಮಾಡಿಸಿದ್ದಾರೆ. ಆ ಖಾತೆಯಿಂದ ತಮ್ಮ ಸ್ನೇಹಿತರು ಮತ್ತು ದೂರದ ಸಂಬಂಧಿಗಳ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆ ನಂತರ ಕೆಲವರಿಂದ ನಗದು ಪಡೆದುಕೊಂಡಿದ್ದಾರೆ ಮತ್ತು ಸ್ವಲ್ಪ ಹಣವನ್ನು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಇ.ಡಿ ಮಾಹಿತಿ ನೀಡಿದೆ.

ಈ ಸಂಬಂಧ ಬ್ಯಾಂಕ್ ಖಾತೆ ವಹಿವಾಟುಗಳು, ಚೆಕ್‌ ವಹಿವಾಟು, ಲೆಕ್ಕದ ಪುಸ್ತಕ ಮತ್ತು ಹಲವು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಲೀಲಾವತಿ ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಏಳು ದಿನಗಳ ಕಸ್ಟಡಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.