ವಿಧಾನಮಂಡಲ
Pavitra Bhat
ವಿಧಾನ ಪರಿಷತ್...
ಹಂಪಿ ಮಾದರಿಯಲ್ಲಿ ಬೇಲೂರು, ಹಳೇಬೀಡು, ಪಟ್ಟದಕಲ್ಲು, ಐಹೊಳೆ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಯವರಿಂದ ವಿಶೇಷ ಅನುದಾನ ಪಡೆಯಲಾಗುತ್ತದೆ. ನೇಪಾಳದ ಕಠ್ಮಂಡು, ಇಂಡೊನೇಷ್ಯಾದ ಜಕಾರ್ತ, ಥಾಯ್ಲೆಂಡ್‌ನ ಬ್ಯಾಂಕಾಕ್, ಶ್ರೀಲಂಕಾದ ಕೊಲಂಬೊ ನಗರಗಳಿಗಿಂತ ಕರ್ನಾಟಕದಲ್ಲಿ ಪ್ರವಾಸದರ ದುಬಾರಿ ಇದೆ. ಆದರೆ, ಲಂಡನ್, ಬರ್ಲಿನ್, ಟೊಕಿಯೊ, ವಾಷಿಂಗ್ಟನ್, ಮ್ಯಾಡ್ರಿಡ್, ಮಾಸ್ಕೋ ನಗರಗಳಿಗೆ ಹೋಲಿಸಿದರೆ ಪ್ರವಾಸದ ದರ ಕಡಿಮೆ ಇದೆ
–ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವ (ಪ್ರಶ್ನೆ: ಎಂ. ನಾಗರಾಜು, ಕಾಂಗ್ರೆಸ್ ಸದಸ್ಯ)
ಚಿತ್ರದುರ್ಗದ ಹಿರಿಯೂರಿನ ವಾಣಿ ವಿಲಾಸ ಸಾಗರದಲ್ಲಿ ನವೆಂಬರ್ 1ರಿಂದ ಬೋಟಿಂಗ್ ಪ್ರಾರಂಭಿಸಲಾಗುತ್ತದೆ. ಕಯಾಟಿಂಗ್, ಜೆಟ್ ಸ್ಕೀ, ಬನಾನಾ ರೈಡ್ ಮುಂತಾದ ಚಟುವಟಿಕೆಗಳನ್ನು ಆರಂಭಿಸಲು ಜಲಸಂಪನ್ಮೂಲ ಇಲಾಖೆಯ ನಿರಾಕ್ಷೇಪಣಾಪತ್ರವನ್ನು ನಿರೀಕ್ಷಿಸಲಾಗುತ್ತಿದೆ. ರಾಜ್ಯದ ಪ್ರಮುಖ 15 ಪ್ರವಾಸಿ ತಾಣಗಳಲ್ಲಿ ಕೆಎಸ್‌ಟಿಡಿಸಿ ಹೋಟೆಲ್ ಇಲ್ಲ. ಏಳು ಪ್ರವಾಸಿ ತಾಣಗಳಲ್ಲಿ ಈ ವರ್ಷವೇ ಹೋಟೆಲ್ ನಿರ್ಮಿಸಲಾಗುತ್ತದೆ
–ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವ (ಪ್ರಶ್ನೆ: ಡಿ.ಟಿ. ಶ್ರೀನಿವಾಸ್, ಕಾಂಗ್ರೆಸ್ ಸದಸ್ಯ)
ಕೋಮು ಗಲಭೆ, ಗೋಹತ್ಯೆ, ಅನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ದಕ್ಕಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಈ ಕಾರ್ಯಪಡೆ ಕಾರ್ಯಾರಂಭಿಸಿದ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ದ್ವೇಷ ಭಾಷಣ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ತರಲು ಸರ್ಕಾರ ಚಿಂತನೆ ನಡೆಸಿದೆ
–ಜಿ. ಪರಮೇಶ್ವರ, ಗೃಹ ಸಚಿವ (ಪ್ರಶ್ನೆ: ಕಿಶೋರ್ ಕುಮಾರ್ ಪುತ್ತೂರ್, ಬಿಜೆಪಿ ಸದಸ್ಯ)
ವಿಧಾನಸಭೆ...
ಅನಾರೋಗ್ಯದಿಂದ ಬಳಲುತ್ತಿರುವವರು ತ್ವರಿತವಾಗಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ 24 ಗಂಟೆಯೊಳಗೆ ಬಿಪಿಎಲ್ ವಿತರಣೆ ಸಂಬಂಧ ಪ್ರತ್ಯೇಕ ಪೋರ್ಟಲ್ ಸೇವೆ ಆರಂಭಿಸಲಾಗುವುದು. ಅಲ್ಲದೆ, ಬಿಪಿಎಲ್ ಕಾರ್ಡ್ ಪಡೆದಿರುವ 13 ಲಕ್ಷ ಅನರ್ಹರು ಎಪಿಎಲ್ ಪಡೆದರೆ ಅರ್ಹ ಬಿಪಿಎಲ್ ಕುಟುಂಬಗಳಿಗೆ ಮುಂದಿನ ತಿಂಗಳಿನಿಂದ ಬಿಪಿಎಲ್ ಕಾರ್ಡ್ ವಿತರಣೆಗೆ ಅರ್ಜಿ ಸ್ವೀಕಾರ ಆರಂಭಿಸಲು ಚಿಂತನೆ ನಡೆಸಲಾಗಿದೆ
ಆಹಾರ ಸಚಿವ ಕೆ.ಎಚ್. ಮುನಿಯಪ್ಪ (ಪ್ರಶ್ನೆ: ಬಿಜೆಪಿಯ ಭರತ್ ಶೆಟ್ಟಿ)
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿದೆ. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ನಿಯೋಜಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಎಲ್‌ಕೆಜಿ, ಯುಕೆಜಿಯಲ್ಲಿರುವ ಎಲ್ಲ ಮಕ್ಕಳಿಗೂ ಬಿಸಿಯೂಟ ಒದಗಿಸಲು ಕೂಡಾ ಕ್ರಮ ವಹಿಸಲಾಗುವುದು. ಅಲ್ಲದೆ, ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜನೆ ಬಗ್ಗೆಯೂ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ (ಶಾಲಾ ಶಿಕ್ಷಣ ಸಚಿವರ ಪರವಾಗಿ) (ಪ್ರಶ್ನೆ: ಬಿಜೆಪಿಯ ಕೆ. ಗೋಪಾಲಯ್ಯ)
ಹಿಂದಿನ ಸರ್ಕಾರ ಸ್ಥಾಪಿಸಿದ್ದ ಏಳು ಹೊಸ ವಿಶ್ವವಿದ್ಯಾಲಯಗಳ ಸಾಧಕ-ಬಾಧಕ, ಮುಂದುವರಿಕೆ, ರದ್ದತಿ ವಿಚಾರವಾಗಿ ಚರ್ಚಿಸಲು ಉಪ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆಯಾಗಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಬಗ್ಗೆಯೂ ಆ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ (ಪ್ರಶ್ನೆ: ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.