ADVERTISEMENT

ಬಿಪಿಎಲ್ ಕುಟುಂಬಗಳಿಗೆ ಮಾಸಿಕ ₹ 2000 ನೆರವು: ಸಚಿವ ಆರ್. ಅಶೋಕ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 16:29 IST
Last Updated 17 ಜನವರಿ 2023, 16:29 IST
ಆರ್‌. ಅಶೋಕ
ಆರ್‌. ಅಶೋಕ    

ಕಲಬುರಗಿ: ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ ₹ 2000 ನೆರವು ನೀಡಲು ನಿರ್ಧರಿಸಲಾಗಿದ್ದು, ಬರುವ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಘೋಷಿಸಿದರು.

ತಾಲ್ಲೂಕಿನ ಮಾಚನಾಳ ತಾಂಡಾದಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ತಾವು ಅಧಿಕಾರಕ್ಕೆ ಬಂದರೆ ಮಾಸಿಕ ₹ 2000 ನೀಡುವುದಾಗಿ ಹೇಳಿದ್ದಾರೆ. ಅದು ಜುಲೈನಿಂದ ಅನ್ವಯವಾಗಲಿದೆ. ಆದರೆ ಅವರು ಅಧಿಕಾರಕ್ಕೇ ಬರುವುದಿಲ್ಲ. ಆದರೆ ನಾವು ತಕ್ಷಣವೇ ಶುರು ಮಾಡಲಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದರು.

ನಾವು ನಾಯಕರಲ್ಲ‌ ಸೇವಕರು: ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಿದ್ದ ನಾ ನಾಯಕಿ ಕಾರ್ಯಕ್ರಮವನ್ನು ಲೇವಡಿ ಮಾಡಿದ ಅವರು, ನಾ ನಾಯಕ, ನಾ ನಾಯಕಿ ಎಂದು ನಾವು ಹೇಳುವುದಿಲ್ಲ.‌ ಬದಲಾಗಿ ಪ್ರಧಾನಿ ಮೋದಿ ಅವರೇ ಹೇಳಿದಂತೆ ‌ನಾವೆಲ್ಲ ಸೇವಕರು‌ ಎಂದರು.

ADVERTISEMENT

ಅಲೆಮಾರಿಗಳಿಗೆ ನೆಲೆ: ಕಳೆದ 75 ವರ್ಷಗಳಿಂದ ಆಗದ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ್ದು, ದಾಖಲೆಯೇ ಇಲ್ಲದ ತಾಂಡಾಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅಲೆಮಾರಿಗಳಿಗೆ ನೆಲೆ ನೀಡುವ ಕೆಲಸ ಮಾಡಿದ್ದೇವೆ. ಆ ಮೂಲಕ ಒಂದು ಉದಾತ್ತ ಕೆಲಸ ಮಾಡಿದ ಹೆಮ್ಮೆ ಇದೆ ಎಂದು ಸಚಿವ ಅಶೋಕ ಹೇಳಿದರು.

ಮಾಚನಾಳ ತಾಂಡಾಕ್ಕೆ ₹ 1 ಕೋಟಿ: ಹಕ್ಕುಪತ್ರ ವಿತರಣೆಯ ಬಳಿಕ ಮಾಚನಾಳ ತಾಂಡಾ ಗ್ರಾಮವಾಗಿ ಪರಿವರ್ತನೆಯಾಗಲಿದ್ದು, ಗ್ರಾಮದ ಸಮಗ್ರ ಅಭಿವೃದ್ಧಿಗೆ ₹ 1 ಕೋಟಿ ನೆರವು ನೀಡಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಕ್ಕುಪತ್ರ ವಿತರಣೆಯ ಬಗ್ಗೆ ಈಗ ತಕರಾರು ತೆಗೆಯುವ ಕಾಂಗ್ರೆಸ್ಸಿಗರು ಇಷ್ಟು ವರ್ಷ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.